ಈ ಸಂಕ್ರಾಂತಿಗೆ ‘ಗೇಮ್ ಚೇಂಜಿಂಗ್’ ಪಾಠ ಕಲಿತ ನಿರ್ಮಾಪಕ ದಿಲ್ ರಾಜು
Producer Dil Raju: ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ದಿಲ್ ರಾಜು ಸಹ ಒಬ್ಬರು. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆದ ‘ಗೇಮ್ ಚೇಂಜರ್’ ಸಿನಿಮಾಕ್ಕೆ ನೂರಾರು ಕೋಟಿ ಬಂಡವಾಳ ಹೂಡಿದ್ದರು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ‘ಗೇಮ್ ಚೇಂಜರ್’ ಜೊತೆಗೆ ಬಿಡುಗಡೆ ಆದ ಮಧ್ಯಮ ಬಜೆಟ್ನ ‘ಸಂಕ್ರಾತಿಕಿ ವಸ್ತುನ್ನಾಮ್’ ಸಿನಿಮಾ ಸೂಪರ್ ಹಿಟ್ ಆಯ್ತು. ಇದರ ಬಗ್ಗೆ ದಿಲ್ ರಾಜು ಮಾತನಾಡಿದ್ದಾರೆ.

ದಿಲ್ ರಾಜು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ಹಾಗೂ ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಬಲು ಪ್ರಭಾವಿ ನಿರ್ಮಾಪಕರೂ ಹೌದು ದಿಲ್ ರಾಜು. ದೊಡ್ಡ ದೊಡ್ ಸ್ಟಾರ್ ನಟರ, ದೊಡ್ಡ ಬಜೆಟ್ ಸಿನಿಮಾಗಳನ್ನು ದಿಲ್ ರಾಜು ನಿರ್ಮಿಸುತ್ತಿರುತ್ತಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ರಾಮ್ ಚರಣ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಗೇಮ್ ಚೇಂಜರ್’ಗೆ ಇವರೇ ನಿರ್ಮಾಪಕ. ಸಂಕ್ರಾಂತಿಗೆ ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೀರಸ ಪ್ರದರ್ಶನ ಕಂಡಿದೆ. ಸಿನಿಮಾದ ಮೇಲೆ ಕೋಟಿ-ಕೋಟಿ ಸುರಿದಿದ್ದ ದಿಲ್ ರಾಜುಗೆ ಭಾರಿ ನಷ್ಟವಾಗಿದೆ.
ಆದರೆ ಅದೇ ಸಂಕ್ರಾಂತಿಗೆ ದಿಲ್ ರಾಜು ಬಂಡವಾಳ ತೊಡಗಿಸಿ ವಿತರಣೆ ಸಹ ಮಾಡಿದ್ದ ಮಧ್ಯಮ ಬಜೆಟ್ನ ಕಾಮಿಡಿ ಆಕ್ಷನ್ ಸಿನಿಮಾ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ತೆರೆಗೆ ಬಂತು. ವೆಂಕಟೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳೇನೂ ಇರಲಿಲ್ಲ. ಆದರೆ ಭಾರಿ ನಿರೀಕ್ಷೆ ಇಡಲಾಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಫ್ಲಾಪ್ ಆಯ್ತು, ಹೆಚ್ಚೇನೂ ನಿರೀಕ್ಷೆ ಇರದಿದ್ದ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಹಿಟ್ ಎನಿಸಿಕೊಂಡಿದೆ.
ನಿನ್ನೆಯಷ್ಟೆ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರತಂಡ ಗೆಲುವಿನ ಸುದ್ದಿಗೋಷ್ಠಿ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕ, ವಿತರಕ ದಿಲ್ ರಾಜು ಸಹ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ದೊಡ್ಡ ಪಾಠವನ್ನೇ ಈ ಸಂಕ್ರಾಂತಿ ಹಬ್ಬ ಕಲಿಸಿದೆ ಎಂದಿದ್ದಾರೆ. ಆ ಮೂಲಕ ದೊಡ್ಡ ನಟರು, ನಿರ್ದೇಶಕರನ್ನು ನಂಬಿಕೊಂಡು ದೊಡ್ಡ ಮೊತ್ತದ ಬಂಡವಾಳಗಳನ್ನು ತೊಡಗಿಸಬಾರದು ಎಂದು ಕಲಿತಿದ್ದಾಗಿ ಪರೋಕ್ಷವಾಗಿ ದಿಲ್ ರಾಜು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ತೆಲಂಗಾಣ ಜನರ ಕ್ಷಮೆ ಕೇಳಿದ ನಿರ್ಮಾಪಕ ದಿಲ್ ರಾಜು
‘ಕಳೆದ ನಾಲ್ಕು ವರ್ಷಗಳಿಂದಲೂ ಏರಿಳಿತಗಳನ್ನು ನೋಡುತ್ತಲೇ ಇದ್ದೆ. ಇದೀಗ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಮೂಲಕ ಮತ್ತೆ ಟ್ರ್ಯಾಕ್ಗೆ ಬಂದಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಶಂಕರ್ ಅವರಿಗೂ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ದಿಲ್ ರಾಜು. ‘ಸಿನಿಮಾದ ಮೇಲೆ ಭಾರಿ ಬಜೆಟ್ ಹಾಕಿದ ಮಾತ್ರಕ್ಕೆ ಸಿನಿಮಾ ಹಿಟ್ ಆಗುತ್ತದೆ ಎಂದೇನೂ ಇಲ್ಲ. ಸುಖಾ ಸುಮ್ಮನೆ ಹಣ ಖರ್ಚು ಮಾಡುವುದಕ್ಕಿಂತಲೂ ಒಳ್ಳೆಯ ಕತೆ, ನಿರೂಪಣೆ ಸಿನಿಮಾ ಗೆಲುವಿನಲ್ಲಿ ಮುಖ್ಯವಾಗಿರುತ್ತದೆ’ ಎಂದಿದ್ದಾರೆ ದಿಲ್ ರಾಜು.
‘ಗೇಮ್ ಚೇಂಜರ್’ ಸಿನಿಮಾದ ಕಲೆಕ್ಷನ್ ಪೋಸ್ಟರ್ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದಿಲ್ ರಾಜು, ‘ಎಲ್ಲರಿಗೂ ಕೆಲವು ವೀಕ್ನೆಸ್ಗಳು ಇರುತ್ತವೆ. ಹಾಗೆಯೇ ನಮಗೂ ಸಹ ಇತ್ತು ಹಾಗಾಗಿ ಆ ಪೋಸ್ಟರ್ ಬಿಡುಗಡೆ ಆಗಿ ಬಿಟ್ಟಿತು. ಈಗ ಎಲ್ಲ ಸೆಂಟರ್ಗಳ ಕಲೆಕ್ಷನ್ಗಳು ನಿಮಗೆ ಸಿಗುತ್ತದೆ ಅಲ್ಲವೆ, ಹಾಗಿದ್ದರೆ ಇನ್ನು ಮುಂದೆ ನೀವೆ ಪೋಸ್ಟರ್ ಮಾಡಿ ಬಿಟ್ಟುಬಿಡಿ ಆಗ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದಿದ್ದಾರೆ ದಿಲ್ ರಾಜು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ