
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದರು. ಉಪೇಂದ್ರ, ರಚಿತಾ ರಾಮ್, ಸೌಬಿನ್ ಶಾಹಿರ್, ಆಮಿರ್ ಖಾನ್ (Aamir Khan), ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ಅಭಿನಯಿಸಿದರು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇತ್ತೀಚೆಗೆ ಒಂದು ಸುದ್ದಿ ಪ್ರಕಟ ಆಯಿತು. ಆಮಿರ್ ಖಾನ್ ಅವರು ‘ಕೂಲಿ’ (Coolie) ಸಿನಿಮಾದಲ್ಲಿ ನಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಯಿತು. ಆ ಬಗ್ಗೆ ಅವರ ತಂಡದವರಿಂದ ಪ್ರತಿಕ್ರಿಯೆ ಬಂದಿದೆ.
ಅಂದಹಾಗೆ, ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾದಲ್ಲಿ ಮಾಡಿದ್ದು ಅತಿಥಿ ಪಾತ್ರ. ಅದನ್ನು ಆಮಿರ್ ಖಾನ್ ಅವರೇ ಮಾಡಬೇಕು ಎಂಬುದೇನೂ ಇರಲಿಲ್ಲ. ರಜನಿಕಾಂತ್ ಅವರ ಮೇಲಿನ ಪ್ರೀತಿ, ಗೌರವದ ಕಾರಣಕ್ಕೆ ಅವರು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡರು. ಆದರೆ ಈಗ ‘ಯಾಕಾದ್ರೂ ರಜನಿ ಜೊತೆ ಕೂಲಿ ಸಿನಿಮಾ ಮಾಡಿದ್ನೋ’ ಎಂದು ಆಮಿರ್ ಖಾನ್ ಬೇಸರ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಟ್ವಿಸ್ಟ್ ಏನೆಂದರೆ ಆಮಿರ್ ಖಾನ್ ಅವರು ಯಾವ ಪತ್ರಿಕೆಗೂ ಆ ರೀತಿಯ ಹೇಳಿಕೆ ನೀಡಿಲ್ಲ! ಈ ಕುರಿತು ಅವರ ಟೀಮ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ‘ಆಮಿರ್ ಖಾನ್ ಅವರು ಇಂಥ ಯಾವುದೇ ಸಂದರ್ಶನ ನೀಡಿಲ್ಲ. ಕೂಲಿ ಸಿನಿಮಾ ಬಗ್ಗೆ ಅವರು ನೆಗೆಟಿವ್ ಆಗಿ ಮಾತನಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
‘ರಜನಿಕಾಂತ್ ಬಗ್ಗೆ ಆಮಿರ್ ಖಾನ್ ಅವರಿಗೆ ಬಹಳ ಗೌರವ ಇದೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಇಡೀ ಕೂಲಿ ಸಿನಿಮಾ ತಂಡದ ಬಗ್ಗೆ ಅವರಿಗೆ ಆ ಗೌರವ ಇದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಗ್ಗೆ ಈ ಗಳಿಕೆಯೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಆಮಿರ್ ಖಾನ್ ತಂಡದವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಹೇಗಿದೆ? ವಿಮರ್ಶೆ ತಿಳಿಸಿದ ಫ್ಯಾನ್ಸ್
‘ಕೂಲಿ’ ಸಿನಿಮಾಗೆ ಅಂದಾಜು 400 ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿತ್ತು. ಅದಕ್ಕೆ ಹೋಲಿಸಿದರೆ 500 ಕೋಟಿ ರೂಪಾಯಿ ಕಲೆಕ್ಷನ್ ಏನೇನೂ ಅಲ್ಲ. ಅಲ್ಲದೇ ವಿಮರ್ಶೆ ದೃಷ್ಟಿಯಿಂದಲೂ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಆಮಿರ್ ಖಾನ್ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.