ಶೂಟಿಂಗ್​ ವೇಳೆ ಅವಘಡ: ‘ಕಾಂತಾರ’ ಚಿತ್ರದ ವಕೀಲ ಪಾತ್ರದಾರಿ ನಟ ನವೀನ್ ಡಿ. ಪಡೀಲ್ ಆಸ್ಪತ್ರೆಗೆ ದಾಖಲು

ಮಜಾ ಟಾಕೀಸ್'​ನ ಗುಂಡುಮಾಮ‌ ಖ್ಯಾತಿಯ ನಟ ನವೀನ್ ಡಿ. ಪಡೀಲ್​ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಬಿದ್ದು ತೊಡೆಯ ಭಾಗದಲ್ಲಿ ಮೂಳೆ ಮುರಿದಿದೆ ಎನ್ನಲಾಗುತ್ತಿದೆ.

ಶೂಟಿಂಗ್​ ವೇಳೆ ಅವಘಡ: 'ಕಾಂತಾರ' ಚಿತ್ರದ ವಕೀಲ ಪಾತ್ರದಾರಿ ನಟ ನವೀನ್ ಡಿ. ಪಡೀಲ್ ಆಸ್ಪತ್ರೆಗೆ ದಾಖಲು
ನಟ ನವೀನ್ ಡಿ. ಪಡೀಲ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 23, 2022 | 8:19 PM

‘ಮಜಾ ಟಾಕೀಸ್’​ನ ಗುಂಡುಮಾಮ‌ ಖ್ಯಾತಿಯ ನಟ ನವೀನ್ ಡಿ. ಪಡೀಲ್ (naveen d padil)​ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಬಿದ್ದು ತೊಡೆಯ ಭಾಗದಲ್ಲಿ ಮೂಳೆ ಮುರಿದಿದೆ ಎನ್ನಲಾಗುತ್ತಿದೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಕನ್ನಡ, ಮಲಯಾಳಂ ಭಾಷೆಯಲ್ಲಿ ಬರಲಿರುವ ಸಿನಿಮಾದ ಶೂಟಿಂಗ್ ವೇಳೆ ಅವಘಡ ಉಂಟಾಗಿದೆ. ‘ಮಜಾ ಟಾಕೀಸ್’ ಮೂಲಕ ನವೀನ್ ಡಿ. ಪಡೀಲ್ ಇಡೀ‌ ರಾಜ್ಯದ ಮನೆ ಮಾತಾಗಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ವಕೀಲ ಪಾತ್ರದಲ್ಲಿ ನವೀನ್ ಡಿ. ಪಡೀಲ್​ ಅವರು ನಟಿಸಿದ್ದಾರೆ. ಮೂಲಗಳ ಪ್ರಕಾರ ವೈದ್ಯರು ನವೀನ್ ಅವರಿಗೆ ಮೂರು ತಿಂಗಳು ಸಂಪೂರ್ಣ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಬೇಗ ಗುಣಮುಖರಾಗಲಿ ಎಂದು ನವೀನ್ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ನಟ ನವೀನ್ ಡಿ. ಪಡೀಲ್​ ಅವರು ಮಲಯಾಳಂ ಚಿತ್ರದ ಮೂಲಕ ಬಣ್ಣದ ಬದುಕನ್ನು ಆರಂಭಿಸಿದವರು. ನಂತರ ತುಳು ಚಿತ್ರರಂಗಕ್ಕೂ ಅವರು ಪಾದಾರ್ಪಣೆ ಮಾಡಿದರು. ಅನೇಕ ತುಳು ಸಿನಿಮಾಗಳನ್ನು ಮಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತುಳು ಚಿತ್ರರಂಗದಲ್ಲಿ ಬೇಡಿಕೆ ನಟ ಆಗಿರುವ ನವೀನ್ ಡಿ. ಪಡೀಲ್, ಕನ್ನಡ ಚಿತ್ರಗಳನ್ನು ಸಹ ಮಾಡಿದ್ದಾರೆ. ಕನ್ನಡದಲ್ಲಿ ಅವರು ಮಾಡಿದ ಚಿತ್ರಗಳು ಬೆರಳೆಣಿಕೆಯಷ್ಟೇ ಇರಬಹುದು. ಆದರೆ ಉತ್ತಮ ನಟ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನಟ ಸೃಜನ್ ಲೋಕೇಶ್​ ನೇತೃತ್ವದ ಕಾಮಿಡಿ ಶೋ ಆದ ‘ಮಾಜಾ ಟಾಕೀಸ್’​ನಲ್ಲಿ ಗುಂಡುಮಾಮ‌ ಎಂದೇ ನವೀನ್ ಅವರು  ಫೇಮಸ್​ ಆಗಿದ್ದರು. ತಮ್ಮ ನಟನೆಯಿಂದಲೇ ಕನ್ನಡಿಗರ ಹೊಟ್ಟೆ ಹುಣ್ಣಾಗುವಂತೆ ನಗಿಸಿದವರು ನವೀನ್ ಡಿ. ಪಡೀಲ್. 2015 ರಿಂದ 2017 ರವರೆಗೂ ‘ಮಜಾ ಟಾಕೀಸ್’​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದರು. ಆದರೆ ಈಗ ಗುಂಡುಮಾಮ‌ ಆಸ್ಪತ್ರೆ ಸೇರಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದಷ್ಟು ಬೇಗ ಗುಣಮುಖರಾಗಿ ಮತ್ತೆ ನಮ್ಮನ್ನು ನಗಿಸಲಿ ಎಂದು ಕೋರಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada