ಮನೆ ಕೆಲಸದ ಮಹಿಳೆಯರನ್ನು ಕೂಡಿಹಾಕಿದ ನಟ ರವಿ ಮೋಹನ್? ಹೊಸ ವಿವಾದ

ಕಾಲಿವುಡ್ ನಟ ರವಿ ಮೋಹನ್ ಅವರ ಮನೆಯಲ್ಲಿ ಕೆಲಸದವರನ್ನು ಕೂಡಿಹಾಕಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ವಿಚಾರಣೆ ನಡೆಸಿದಾಗ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಾಣೆಯಾಗಿದ್ದರಿಂದ ಈ ಸಿಬ್ಬಂದಿಯನ್ನು ಶಂಕೆಯ ಮೇಲೆ ತಾವೇ ಖಾಸಗಿಯಾಗಿ ವಿಚಾರಣೆ ನಡೆಸುತ್ತಿರುವುದಾಗಿ ರವಿ ಮೋಹನ್ ಕಡೆಯವರು ತಿಳಿಸಿದ್ದಾರೆ ಎನ್ನಲಾಗಿದೆ.

ಮನೆ ಕೆಲಸದ ಮಹಿಳೆಯರನ್ನು ಕೂಡಿಹಾಕಿದ ನಟ ರವಿ ಮೋಹನ್? ಹೊಸ ವಿವಾದ
Ravi Mohan

Updated on: Jun 24, 2026 | 9:11 PM

ಮುಖ್ಯಾಂಶಗಳು

  • ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ ಅವರ ನಿವಾಸದಲ್ಲಿ ಕಳ್ಳತನ ಆಗಿದೆ.
  • ಒಡವೆ, ಹಣ ಕದ್ದ ಆರೋಪದಲ್ಲಿ ಮನೆ ಕೆಲಸದವರನ್ನು ಕೂಡಿಹಾಕಿದ್ದಾರೆ ಎನ್ನಲಾಗಿದೆ.
  • ಖಾಸಗಿಯಾಗಿ ಯಾರನ್ನೂ ಕೂಡಿಹಾಕುವಂತಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (ಜಯಂ ರವಿ) ಅವರ ಇಂಜಂಬಾಕ್ಕಂನಲ್ಲಿರುವ ಐಷಾರಾಮಿ ನಿವಾಸ ಈಗ ದೊಡ್ಡ ವಿವಾದಕ್ಕೆ ಕೇಂದ್ರಬಿಂದುವಾಗಿದೆ. ರವಿ ಮೋಹನ್ ಅವರ ಮನೆಯಲ್ಲಿ ಭಾರಿ ಕಳ್ಳತನ (Theft) ನಡೆದಿರುವ ಬೆನ್ನಲ್ಲೇ, ಕೆಲಸದವರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಸಾರದ ಗಲಾಟೆಯಿಂದ ಸುದ್ದಿಯಾಗಿದ್ದ ರವಿ ಮೋಹನ್ (Ravi Mohan) ಅವರು ಈಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ರವಿ ಮೋಹನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಸೋಮವಾರ ಕೆಲಸಕ್ಕೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್​ಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ನೀಲಂಕರೈ ಪೊಲೀಸರು ನಟನ ಮನೆಗೆ ಭೇಟಿ ನೀಡಿದಾಗ, ಆ ಮೂವರನ್ನು ಅಲ್ಲಿಯೇ ತಡೆದು ನಿಲ್ಲಿಸಿರುವುದು ಪತ್ತೆಯಾಗಿದೆ.

ಪೊಲೀಸರ ಎಚ್ಚರಿಕೆ ಮತ್ತು ಬಿಡುಗಡೆ:

ಖಾಸಗಿಯಾಗಿ ಯಾರನ್ನೂ ಕೂಡಿಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದ ಪೊಲೀಸರು, ‘ಕಳ್ಳತನ ನಡೆದಿದ್ದರೆ ಕಾನೂನುಬದ್ಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೇ ಹೊರತು, ಈ ರೀತಿ ಅಕ್ರಮವಾಗಿ ಬಂಧಿಸಿ ವಿಚಾರಣೆ ನಡೆಸಲು ಯಾರಿಗೂ ಹಕ್ಕಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ತಕ್ಷಣವೇ ಪೊಲೀಸರು ಆ ಇಬ್ಬರು ಮಹಿಳೆಯರು ಹಾಗೂ ಬಾಲಕನನ್ನು ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

ದೂರು ನೀಡಿದ ರವಿ ಮೋಹನ್ ಮ್ಯಾನೇಜರ್:

ಇದಾದ ಬಳಿಕ, ರವಿ ಮೋಹನ್ ಅವರ ಮ್ಯಾನೇಜರ್ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಮನೆಯಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಹಾಗೂ 40 ಸಾವಿರ ರೂಪಾಯಿ ಹಣವನ್ನು ಈ ಕೆಲಸದವರೇ ಕದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ನಡೆದಾಗ ರವಿ ಮೋಹನ್ ಮನೆಯಲ್ಲಿದ್ದರೇ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅವರ ತಂಡ ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

ವೈಯಕ್ತಿಕ ಜೀವನದಲ್ಲೂ ವಿವಾದಗಳ ಸುಳಿ:

ಕಳೆದ ಕೆಲವು ಸಮಯದಿಂದ ರವಿ ಮೋಹನ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿದೆ. 2009ರಲ್ಲಿ ಆರತಿ ಅವರನ್ನು ವಿವಾಹವಾಗಿದ್ದ ರವಿ, ಸೆಪ್ಟೆಂಬರ್ 2024ರಲ್ಲಿ ವಿಚ್ಛೇದನ ಘೋಷಿಸಿದ್ದರು. ಇತ್ತೀಚೆಗಷ್ಟೇ ಮೇ 2026ರಲ್ಲಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದ ರವಿ, ವಿಚ್ಛೇದನ ಸಿಗುವವರೆಗೂ ತಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿ ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ. ಈ ನಡುವೆ ಈಗ ಅವರ ಮನೆಯ ಕಳ್ಳತನ ಮತ್ತು ಸಿಬ್ಬಂದಿ ಬಂಧನದ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us