ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?

|

Updated on: Jul 10, 2024 | 1:05 PM

ಬಹುಭಾಷಾ ನಟ ಸಿದ್ಧಾರ್ಥ್ ಈ ಹಿಂದೆಯೂ ತಮ್ಮ ಟ್ವೀಟ್​ಗಳಿಂದ ಇಕ್ಕಟ್ಟಿಗೆ ಸಿಲುಕಿ ಬಳಿಕ ಕ್ಷಮೆ ಕೇಳಿದ್ದಿದೆ. ಈಗ ಹೊಸದಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ಸಿದ್ಧಾರ್ಥ್ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಕ್ಷಮೆ ಕೇಳುವಂಥಹದ್ದು ಏನು ಮಾಡಿದರು ಸಿದ್ಧಾರ್ಥ್.

ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?
Follow us on

ಬಹುಭಾಷಾ ನಟ ಸಿದ್ಧಾರ್ಥ್ ಒಳ್ಳೆಯ ನಟರೇನೋ ಹೌದು, ಆದರೆ ಆಗಾಗ್ಗೆ ತಮ್ಮ ಟ್ವೀಟ್​ ಗಳಿಂದಾಗಿ, ತಮ್ಮ ಖಾಸಗಿ ಜೀವನದಿಂದಾಗಿ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಬ್ಯಾಡ್​ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕುರಿತು ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ತೀವ್ರ ವಿವಾದ ಎಬ್ಬಿಸಿತ್ತು. ಕೊನೆಗೆ ಸಿದ್ಧಾರ್ಥ್, ಸೈನಾ ನೆಹ್ವಾಲ್​ಗೆ ಕ್ಷಮೆ ಕೇಳಿದರು. ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಿದ್ಧಾರ್ಥ್ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಕ್ಷಮೆ ಕೇಳುವಂಥಹ ಕೆಲಸ ಸಿದ್ಧಾರ್ಥ್ ಏನು ಮಾಡಿದ್ದರು?

ಕೆಲವು ದಿನಗಳ ಹಿಂದಷ್ಟೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಚಿತ್ರರಂಗದವರ ಬಳಿ ಮನವಿಯೊಂದನ್ನು ಮಾಡಿದ್ದರು. ಚಿತ್ರರಂಗದವರು ಸಿನಿಮಾದ ಟಿಕೆಟ್ ದರ ಹೆಚ್ಚಳ, ತೆರಿಗೆ ಇಳಿಕೆ ಇನ್ನಿತರೆ ವಿಷಯಗಳಿಗೆ ಸರ್ಕಾರದ ನೆರವು ಕೇಳುತ್ತಿರುತ್ತಾರೆ. ನೆರವು ನೀಡಲು ಸರ್ಕಾರವೂ ಸಿದ್ಧವಾಗಿದೆ. ಆದರೆ ಅದರ ಬದಲಿಗೆ ಚಿತ್ರರಂಗದವರೂ ಸಹ ನೆರವು ನೀಡಬೇಕು, ರಾಜ್ಯದಲ್ಲಿ ಡ್ರಗ್ಸ್ ಮಟ್ಟ ಹಾಕಲು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಚಿತ್ರರಂಗದ ನಟ-ನಟಿಯರು ಮಾಡಬೇಕು ಎಂದಿದ್ದರು.

ಸಿಎಂ ರೇವಂತ್ ರೆಡ್ಡಿಯವರ ಮನವಿಯನ್ನು ಟಾಲಿವುಡ್​ನ ಹಲವು ನಟ-ನಟಿಯರು ಸ್ವಾಗತಿಸಿದ್ದರು. ತಾವು ಡ್ರಗ್ಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ನಿಲ್ಲುವುದಾಗಿ ಹೇಳಿದ್ದರು ಸಹ. ಆದರೆ ನಟ ಸಿದ್ಧಾರ್ಥ್, ಸಿಎಂ ಹೇಳಿಕೆಗೆ ಟಾಂಗ್ ನೀಡುವ ರೀತಿಯ ಹೇಳಿಕೊಂದನ್ನು ಹರಿಬಿಟ್ಟಿದ್ದರು. ‘ನಟರಲ್ಲಿ ಸಾಮಾಜಿಕ ಜವಾಬ್ದಾರಿ ಎನ್ನುವುದು ಅಂತರ್ಗವಾಗಿದೆ. ಅದನ್ನು ಅವರು ಮರೆತಿಲ್ಲ, ಸಿಎಂ ಅವರು ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ’ ಎಂದಿದ್ದರು. ಸಿದ್ಧಾರ್ಥ್​ರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: ಮದುವೆಯಲ್ಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅದಿತಿ ರಾವ್ ಹೈದರಿ-ಸಿದ್ಧಾರ್ಥ್

ಇದೀಗ ತಪ್ಪು ತಿದ್ದಿಕೊಂಡಿರುವ ನಟ ಸಿದ್ಧಾರ್ಥ್, ‘ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಅವರ ಸರ್ಕಾರದ ಕ್ರಮಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ನನ್ನ ಈ ಹಿಂದಿನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ’ ಎಂದಿದ್ದಾರೆ.

ಸಿದ್ಧಾರ್ಥ್ ಈ ಹಿಂದೆ ಬೆಂಗಳೂರಿನಲ್ಲಿ ತಮ್ಮ ‘ಚಿತ್ತ’ ಸಿನಿಮಾದ ಪ್ರಚಾರಕ್ಕೆ ಬಂದಿದ್ದಾಗ ಕನ್ನಡಪರ ಸಂಘಟನೆಗಳಿಂದ ವಿರೋಧವನ್ನು ಅನುಭವಿಸಿದ್ದರು. ‘ಚಿತ್ತ’ ಸಿನಿಮಾದ ಪ್ರಚಾರ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿದ್ದ ಕನ್ನಡಪರ ಹೋರಾಟಗಾರರು, ತಮಿಳು ಸಿನಿಮಾದ ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಹಾಗಾಗಿ ಸಿದ್ಧಾರ್ಥ್ ತಮ್ಮ ಪ್ರಚಾರ ಕಾರ್ಯಕ್ರಮವನ್ನು ನಿಲ್ಲಿಸಬೇಕಾಗಿ ಬಂತು. ಬಳಿಕ ನಟ ಶಿವಣ್ಣ, ಚಿತ್ರರಂಗದ ಪರವಾಗಿ ಸಿದ್ಧಾರ್ಥ್​ ಅವರಿಗೆ ಕ್ಷಮೆ ಕೇಳಿದರು. ಆದರೆ ಸಿದ್ಧಾರ್ಥ್, ಶಿವಣ್ಣನವರ ಕ್ಷಮೆಯನ್ನು ತಾವು ಸ್ವೀಕರಿಸುವುದಿಲ್ಲ ಎಂದಿದ್ದರು.

ಸಿದ್ಧಾರ್ಥ್ ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ತೆಲುಗಿಗೂ ಡಬ್ ಆಗಿದ್ದು ತೆಲುಗು ರಾಜ್ಯಗಳಲ್ಲಿಯೂ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ