ಸ್ಯಾಂಡಲ್ವುಡ್ ಸುಂದರಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವುದು ಗೊತ್ತಿರುವ ವಿಚಾರ. ಇದೀಗ ಮಗುವಿನ ನಾಮಕರಣವನ್ನು ಮಾಡಿ ಮುಗಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುವ ನಟಿ ಸಂಜನಾ, ಮಗುವಿಗೆ ಹೆಸರಿಟ್ಟಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಗುವಿನ ಹೆಸರಿನಲ್ಲಿ ಹೊಸ ಇನ್ಸ್ಟಾಗ್ರಾಮ್ ಖಾತೆಯನ್ನೂ ಕೂಡ ತೆರೆದಿದ್ದಾರೆ. ಇದಾಗ್ಯೂ ಪುಟ್ಟ ಕಂದಮ್ಮನ ಫೋಟೋವನ್ನು ಇನ್ನೂ ಸಹ ರಿವೀಲ್ ಮಾಡಿಲ್ಲ ಎಂಬುದು ವಿಶೇಷ.
ಸಂಜನಾ ಗಲ್ರಾನಿ ತಮ್ಮ ಪತಿ ಮತ್ತು ಮಗು ಜೊತೆಗಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಗು ಮುಖವನ್ನು ಬ್ಲರ್ ಮಾಡಿದ್ದಾರೆ. ಈ ವಿಡಿಯೋಗೆ ಹೊಸ ಪರಿಚಯದ ಕ್ಯಾಪ್ಷನ್ ನೀಡುವ ಮೂಲಕ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ.
“ಹಾಯ್ , ಇಂದು ನಾನು ಅಧಿಕೃತವಾಗಿ ನನ್ನ ಪರಿಚಯವನ್ನು ನಿಮಗೆ ಮಾಡುತ್ತಿದ್ದೇನೆ… ನನ್ನ ಹೆಸರು ” ಅಲಾರಿಕ್ ” . ನನಗೆ ಒಂದು ತಿಂಗಳಾಗಿದೆ. ನಾನು ಇನ್ಸ್ಟಾಗ್ರಾಮ್ಗೆ ಹೊಸಬ.. ಈ ಖಾತೆಯನ್ನು ನನ್ನ ಸೂಪರ್ ಮಾಮ್ ಸಂಜನಾ ಗಲ್ರಾನಿ ನಿರ್ವಹಿಸುತ್ತಿದ್ದಾರೆ… ನೀವು ನನ್ನನ್ನು ಫಾಲೋ ಮಾಡಿ ಮತ್ತು ಸ್ವಲ್ಪ ಪ್ರೀತಿಯನ್ನು ತೋರಿಸುತ್ತೀರಿ ಅಲ್ಲವೇ?” ಎಂದು ಬರೆಯಲಾಗಿದೆ.
ಪ್ರಿನ್ಸ್ ಅಲಾರಿಕ್ ಹೆಸರಿನಲ್ಲಿ ಮಾಡಲಾದ ಈ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸಂಜನಾ ಗಲ್ರಾನಿ ತಮ್ಮ ಮಗುವಿನ ಹೆಸರನ್ನು ಅಲಾರಿಕ್ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅಲಾರಿಕ್ ಹೆಸರಿನ ಅರ್ಥಗಳೇನು ಎಂಬ ಹುಡುಕಾಟ ಶುರುವಾಗಿದೆ. ಅಲಾರಿಕ್ ಎಂದರೆ ಚಕ್ರವರ್ತಿ ಅಥವಾ ಎಲ್ಲರ ಆಡಳಿತಗಾರ ಎಂಬ ಅರ್ಥವಿದೆ. ಹಾಗೆಯೇ ಈ ಹೆಸರನ್ನು ಜರ್ಮನಿ ಹಾಗೂ ಫ್ರೆಂಚ್ನ ಮುಸ್ಲಿಂ, ಕ್ರೈಸ್ತರು ಹೆಚ್ಚಾಗಿ ತಮ್ಮ ಮಕ್ಕಳಿಗೆ ಇಡುತ್ತಾರೆ. ಇದೀಗ ಚಕ್ರವರ್ತಿ ಅರ್ಥ ಹೊಂದಿರುವ ಹೆಸರನ್ನೇ ಸಂಜನಾ ಗಲ್ರಾನಿ ತಮ್ಮ ಪುಟ್ಟ ಪಾಪುಗೆ ಇಟ್ಟಿರುವುದಾಗಿ ಬಹಿರಂಗಪಡಿಸಿದ್ದಾರೆ.
ಸದ್ಯ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಸಂಜನಾ ಮಗುವಿನ ಪಾಲನೆಯಲ್ಲಿ ತೊಡಗಿದ್ದಾರೆ. ಇದಾಗ್ಯೂ ಮುಂಬರುವ ದಿನಗಳಲ್ಲಿ ಬಣ್ಣದ ಲೋಕಕ್ಕೆ ಮರಳುವ ಇಂಗಿತವನ್ನೂ ಕೂಡ ಹೊಂದಿದ್ದಾರೆ. ಹೀಗಾಗಿ ಉತ್ತಮ ಚಿತ್ರಕಥೆ ಅಥವಾ ರಿಯಾಲಿಟಿ ಶೋ ಮೂಲಕ ಸಂಜನಾ ಗಲ್ರಾನಿ ಸ್ಯಾಂಡಲ್ವುಡ್ಗೆ ಮರಳಿದರೂ ಅಚ್ಚರಿಪಡಬೇಕಿಲ್ಲ.