Yash: ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನ್: ಯಶ್​ಗೆ 100 ಕೋಟಿ ಆಫರ್..?

Yash: 'ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ' ಎಂದಿದ್ದ ಯಶ್ ನೂರು ಕೋಟಿ ಸಂಭಾವನೆ ಪಡೆಯಲಿದ್ದಾರಾ?

Yash: ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನ್: ಯಶ್​ಗೆ 100 ಕೋಟಿ ಆಫರ್..?
Yash
TV9kannada Web Team

| Edited By: Zahir PY

Jun 26, 2022 | 5:28 PM

‘ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಯಾವ ಘಳಿಗೆಯಲ್ಲಿ ರಾಕಿಂಗ್ ಸ್ಟಾರ್ ಯಶ್ (YASH) ಇಂತಹದೊಂದು ಡೈಲಾಗ್ ಅಣಿಮುತ್ತನ್ನು ಉದುರಿಸಿದ್ರೋ, ಅಲ್ಲಿಂದಲೇ ಸ್ಯಾಂಡಲ್​ವುಡ್​ನಲ್ಲಿ ರಾಕಿ ಭಾಯ್​ಯ ಹವಾ ಶುರುವಾಗಿತ್ತು. ಆ ಬಳಿಕ ಬಂದ ಕೆಜಿಎಫ್ ಈ ಹವಾ ಅನ್ನು ಸಪ್ತ ಸಾಗರದಾಚೆಗೂ ತಲುಪಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್-2 (KGF Chapter-2) ಮೂಲಕ ಯಶ್ ಬಾಕ್ಸಾಫೀಸ್​ ಕಿಂಗ್ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ರಾಕಿ ಭಾಯ್​ಯ ಕಾಲ್​ ಶೀಟ್​ ಪಡೆಯಲು ನಿರ್ಮಾಪಕರೇ ದಂಡೇ ಕ್ಯೂನಲ್ಲಿದೆ. ಇದಾಗ್ಯೂ ಯಶ್ ಸದ್ಯ ಒಪ್ಪಿರುವುದು ಒಂದೇ ಸಿನಿಮಾವನ್ನು. ಅದು ಕೂಡ ಕನ್ನಡದಲ್ಲೇ ಎಂಬುದು ವಿಶೇಷ.

ಹೌದು, ಸದ್ಯದ ಮಾಹಿತಿ ಪ್ರಕಾರ ಮಫ್ತಿ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆಯಿದೆ. ಇದಾದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ದಿಲ್ ರಾಜು ಚಿತ್ರ. ಯಾರು ಈ ದಿಲ್ ರಾಜು ಎಂದು ಕೇಳಿದ್ರೆ, KGF ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ ಖ್ಯಾತ ನಿರ್ಮಾಪಕರು.

ಇನ್ನು ಹೇಳಬೇಕೇಂದ್ರೆ, ಅಲ್ಲು ಅರ್ಜುನ್ ಅಭಿನಯದ ಆರ್ಯ, ಪರುಗು, ಡಿಜೆ, ಪ್ರಭಾಸ್ ಅಭಿನಯದ ಮುನ್ನ, ಮಿಸ್ಟರ್ ಪರ್ಫೆಕ್ಟ್, ಜೂನಿಯರ್ ಎನ್​ಟಿಆರ್​ ನಟನೆಯ ಬೃಂದಾವನಂ, ರಾಮಯ್ಯ ವಸ್ತವಯ್ಯಾ ಸೇರಿದಂತೆ ಸೂಪರ್ ಹಿಟ್​ ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕ. ಯಾವಾಗ ಕೆಜಿಎಫ್​ ಚಿತ್ರದ ತೆಲುಗು ರೈಟ್ಸ್​ ಅನ್ನು ಪಡೆದುಕೊಂಡರೋ, ಅಂದಿನಿಂದ ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಹಾಗೂ ಯಶ್ ಜೊತೆ ದಿಲ್ ರಾಜು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ದಿಲ್ ರಾಜು ಅವರ ಬರ್ತ್​ ಡೇ ಪಾರ್ಟಿಯಲ್ಲೂ ಯಶ್ ಕಾಣಿಸಿಕೊಂಡಿದ್ದರು.

ಇದೀಗ ಯಶ್ ಅವರಿಗಾಗಿಯೇ ಚಿತ್ರವೊಂದನ್ನು ನಿರ್ಮಿಸಲು ದಿಲ್ ರಾಜು ಮುಂದಾಗಿದ್ದಾರೆ. ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗಿದೆ. ಅಷ್ಟೇ ಅಲ್ಲದೆ ಮುಂದಿನ ಚಿತ್ರಕ್ಕಾಗಿ ರಾಕಿ ಭಾಯ್​ಗೆ ಟಾಲಿವುಡ್ ನಿರ್ಮಾಪಕರು ಭರ್ಜರಿ ಆಫರ್ ಕೂಡ ನೀಡಿದ್ದಾರಂತೆ. ಅದು ಒಂದೆರೆಡು ಕೋಟಿಯಲ್ಲ, ಬರೋಬ್ಬರಿ 100 ಕೋಟಿ ರೂ. ಎಂದರೆ ಅಚ್ಚರಿಪಡಲೇಬೇಕು.

ಅಂದರೆ ದಿಲ್ ರಾಜು ಬಿಗ್ ಬಜೆಟ್ ಮೂವಿ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಾಗಿ ತೆರೆಗೆ ಬರಲಿದೆಯಂತೆ. ಈ ಎರಡೂ ಭಾಗಗಳ ಸಂಭಾವನೆಯಾಗಿ ಯಶ್​ ಅವರಿಗೆ ದಿಲ್ ರಾಜು ನೂರು ಕೋಟಿಯ ಆಫರ್ ನೀಡಿದ್ದಾರೆ ಎಂಬುದು ಸದ್ಯದ ಟಾಲಿವುಡ್​ ಟಾಕು. ಇತ್ತ ಯಶ್ ಹಾಗೂ ದಿಲ್ ರಾಜು ಆತ್ಮೀರರಾಗಿರುವ ಕಾರಣ ಈ ಸುದ್ದಿಯು ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸದ್ಯ ದಿಲ್ ರಾಜುತಮಿಳು ನಟ ವಿಜಯ್ ಜೊತೆ ವಾರಿಸು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಯಶ್ ಅವರೊಂದಿಗಿನ ಚಿತ್ರದ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವುದು ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ದಿಲ್ ರಾಜು ಟಾಲಿವುಡ್​ನಲ್ಲಿ ಕೋಟಿ ನಿರ್ಮಾಪಕ ಎಂದು ಗುರುತಿಸಿಕೊಂಡವರು. ಹೀಗಾಗಿ ಯಶ್ ನಾಯಕನಾಗಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬರುವ ಸಾಧ್ಯತೆಯಿದೆ. ಅದರ ಮೊದಲ ಹೆಜ್ಜೆ ಈ ನೂರು ಕೋಟಿ ಸಂಭಾವನೆ ಎನ್ನಲಾಗುತ್ತಿದೆ.

ಇದನ್ನೂ ಓದಿ

ಒಟ್ಟಿನಲ್ಲಿ ‘ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಎಂದಿದ್ದ ಯಶ್, ನೂರು ಕೋಟಿ ಸಂಭಾವನೆ ಪಡೆದ ಕನ್ನಡದ ಮೊದಲ ನಟ ಎನಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada