ವಿವಾದಾತ್ಮಕ ಹೇಳಿಕೆ ನಟಿ ಕಸ್ತೂರಿ ಶಂಕರ್ ಬಂಧನ
Kasturi Shankar: ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ತೆಲುಗು ಜನ, ಅಬ್ರಾಹ್ಮಣರ ಬಗ್ಗೆ ನೀಡಿರುವ ನೀಚ ಹೇಳಿಕೆಯಿಂದಾಗಿ ನಟಿಯನ್ನು ಬಂಧಿಸಲಾಗಿದೆ.
ಕನ್ನಡ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಹಾಗೂ ಬಿಜೆಪಿ ವಕ್ತಾರೆಯೂ ಆಗಿರುವ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್ನ ಗಚ್ಚಿಬೋಲಿ ಪ್ರದೇಶದಲ್ಲಿ ಇಂದು (ನವೆಂಬರ್ 16) ಬಂಧಿಸಿದ್ದಾರೆ. ನಟಿ ಕಸ್ತೂರಿ ಶಂಕರ್ ವಿರುದ್ಧ ಕೆಲ ದಿನಗಳ ಹಿಂದೆ ಚೆನ್ನೈ ಸೇರಿದಂತೆ ತಮಿಳುನಾಡಿನ ಇನ್ನೂ ಕೆಲವು ಕಡೆ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೆ ನಟಿ ಕಸ್ತೂರಿ ಶಂಕರ್ ರಾಜ್ಯ ಬಿಟ್ಟು ಪರಾರಿಯಾಗಿದ್ದರು. ಅದರ ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರಾದರೂ ಸಹ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಬೆನ್ನಲ್ಲೆ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ ಮೊದಲ ವಾರ ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟಿ ಕಸ್ತೂರಿ ಶಂಕರ್, ತೆಲುಗು ಜನರ ವಿರುದ್ಧ, ಅಬ್ರಾಹ್ಮಣರ ವಿರುದ್ಧ, ಅಬ್ರಾಹ್ಮಣ ಸರ್ಕಾರಿ ಸಿಬ್ಬಂದಿ ಬಗ್ಗೆ ಆಡಿದ್ದ ಮಾತುಗಳು ತೀವ್ರ ವಿವಾದ ಎಬ್ಬಿಸಿದ್ದವು. ನಟಿ ಕಸ್ತೂರಿ ಶಂಕರ್ ವಿರುದ್ಧ ತೆಲುಗು ರಾಜ್ಯದಲ್ಲಿ ಸೇರಿದಂತೆ ತಮಿಳುನಾಡಿನಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು. ತಮಿಳುನಾಡಿನ ಡಿಎಂಕೆಯ ಕೆಲ ಮುಖಂಡರು ಸೇರಿದಂತೆ ಇನ್ನಿತರೆ ಕೆಲವರು ನಟಿಯರ ವಿರುದ್ಧ ತಮಿಳುನಾಡಿನ ಕೆಲವೆಡೆ ದೂರು ದಾಖಲಿಸಿದ್ದರು.
ತಮಿಳು ರಾಜರು ಇರಿಸಿಕೊಂಡಿದ್ದ ವೇಶ್ಯೆಯರ ಸೇವೆ ಮಾಡಲು ಬಂದ ತೆಲುಗರು ಈಗ ತಾವೇ ತಮಿಳರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂಥಹವರು ಬ್ರಾಹ್ಮಣರು ಇಲ್ಲಿನವರಲ್ಲ ಹೊರಗಿನಿಂದ ಬಂದವರು ಎನ್ನುತ್ತಿದ್ದಾರೆ’ ಎಂದಿದ್ದರು. ಅದೇ ಭಾಷಣದಲ್ಲಿ ತಮಿಳುನಾಡಿನ ಸರ್ಕಾರಿ ಕಚೇರಿಗಳಲ್ಲಿ ಅಬ್ರಾಹ್ಮಣ ಸಿಬ್ಬಂದಿಯೆಲ್ಲರೂ ಲಂಚ ಪಡೆಯುತ್ತಿದ್ದಾರೆ. ಸೋಮಾರಿಗಳಾಗಿದ್ದಾರೆ ಎಂದು ಸಹ ಟೀಕೆ ಮಾಡಿದ್ದರು.
ಇದನ್ನೂ ಓದಿ:ತೆಲುಗು ಜನರ ಬಗ್ಗೆ ಹೇಳಿಕೆ, ಖ್ಯಾತ ನಟಿಯ ವಿರುದ್ಧ ಪ್ರತಿಭಟನೆ
ಚಾತುವರ್ಣದ ವಿಷಯವಾಗಿಯೂ ಮಾತನಾಡಿದ್ದ ಕಸ್ತೂರಿ ಶಂಕರ್, ‘ನಾಲ್ಕು ವರ್ಣಗಳಿಂದ ದಲಿತ, ಆದಿವಾಸಿಗಳನ್ನು ಹೊರಗಿಡಬೇಕು, ಅವರನ್ನು ಅವರ್ಣೀಯರು ಎಂದು ಕರೆಯಬೇಕು’ ಎಂದಿದ್ದರು. ಜಾತಿ ವ್ಯವಸ್ಥೆ ಎಂದಿಗೂ ಅಳಿಯುವುದಿಲ್ಲ, ಅದು ಹಾಗೆಯೇ ಇರುತ್ತದೆ, ಇರಬೇಕು, ಆದರೆ ನಾಲ್ಕು ವರ್ಣಗಳು ಒಟ್ಟಾಗಿ ಒಬ್ಬರೊಟ್ಟಿಗೆ ಒಬ್ಬರು ಒಗ್ಗಟ್ಟಿನಿಂದ ಮುಂದೆ ನಡೆದರೆ ಹಿಂದೂ ಧರ್ಮ ಬೆಳೆಯುತ್ತದೆ’ ಎಂದಿದ್ದರು.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಟಿ ಕಸ್ತೂರಿ ಶಂಕರ್ ಚೆನ್ನೈ ಬಿಟ್ಟು ಪಲಾಯನ ಮಾಡಿದ್ದರು. ಅಂತೆಯೇ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ, ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದಿತ್ತು. ಅದರ ಬೆನ್ನಲ್ಲೆ ಈಗ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್ನ ಗಚ್ಚಿಬೋಲಿ ಏರಿಯಾನಲ್ಲಿ ಬಂಧಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ