
ಜೂ ಎನ್ಟಿಆರ್ (Jr NTR) ಈಗ ಪ್ಯಾನ್ ಇಂಡಿಯಾ ನಟ. ಮೊದಲಿನಿಂದಲೂ ಅವರಿಗೆ ಮಾಸ್ ಇಮೇಜಿದೆ. ಈಗಲೂ ಸಹ ಅವರು ಮಾಸ್, ಕಮರ್ಶಿಯನ್ ಸಿನಿಮಾಗಳಲ್ಲಿಯೇ ನಟಿಸುತ್ತಾರೆ, ಯಾವುದೇ ಹೆಚ್ಚಿನ ಪ್ರಯೋಗಕ್ಕೆ ಒಡ್ಡಿಕೊಳ್ಳುವುದಿಲ್ಲ. ಅವರು 2010ರಲ್ಲಿ ನಟಿಸಿದ್ದ ಹಿಟ್ ಸಿನಿಮಾ ‘ಅಧುರ್ಸ್’ ತುಸು ಭಿನ್ನವಾದ ಸಿನಿಮಾ ಆಗಿತ್ತು. ಸಿನಿಮಾನಲ್ಲಿ ಅಪ್ಪಟ ಹಾಸ್ಯ ಪಾತ್ರವೊಂದರಲ್ಲಿ ಜೂ ಎನ್ಟಿಆರ್ ನಟಿಸಿದ್ದರು. ಈಗ ಅದೇ ಸಿನಿಮಾದ ಸೀಕ್ವೆಲ್ನ ಕತೆಯನ್ನು ಕತೆಗಾರ ಕೋನ ವೆಂಕಟ್ ರೆಡಿ ಮಾಡಿದ್ದಾರೆ. ಆದರೆ ಜೂ ಎನ್ಟಿಆರ್ ನಟಿಸುತ್ತಾರಾ ಎಂಬುದೇ ಪ್ರಶ್ನೆ.
2010ರಲ್ಲಿ ಬಿಡುಗಡೆ ಆಗಿದ್ದ ‘ಅಧುರ್ಸ್’ ಸಿನಿಮಾನಲ್ಲಿ ಜೂ ಎನ್ಟಿಆರ್ ಬ್ರಾಹ್ಮಣ ಪೂಜಾರಿಯ ಪಾತ್ರದಲ್ಲಿ ನಟಿಸಿದ್ದರು. ಬ್ರಹ್ಮಾನಂದಂ ಶಿಷ್ಯನಾಗಿ ಸಖತ್ ಆಗಿ ನಟಿಸಿದ್ದರು. ತಮ್ಮ ಅದ್ಭುತ ಟೈಮಿಂಗ್, ಭಿನ್ನ ರೀತಿಯ ಹಾವ-ಭಾವ ತುಂಬಿದ ನಟನೆಯಿಂದ ಪ್ರೇಕ್ಷಕರನ್ನು ಭರಪೂರ ನಗಿಸಿದ್ದರು. ಸಿನಿಮಾನಲ್ಲಿ ಜೂ ಎನ್ಟಿಆರ್ ಅವರದ್ದು ದ್ವಿಪಾತ್ರವಾಗಿತ್ತು, ಒಂದು ಪಾತ್ರ ಹಾಸ್ಯಮಯ ಪಾತ್ರವಾಗಿದ್ದರೆ ಮತ್ತೊಂದು ಮಾಸ್ ಹೀರೋ ರೀತಿಯ ಪಾತ್ರ. ಎರಡನ್ನೂ ಅದ್ಭುತವಾಗಿ ಜೂ ಎನ್ಟಿಆರ್ ನಿಭಾಯಿಸಿದ್ದರು.
ಆ ಸಿನಿಮಾಕ್ಕೆ ಕೋನ ವೆಂಕಟ್ ಕತೆ, ಚಿತ್ರಕತೆ ಬರೆದಿದ್ದರು. ವಿವಿ ವಿನಾಯಕ್ ನಿರ್ದೇಶನ ಮಾಡಿದ್ದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೋನ ವೆಂಕಟ್, ‘ಅಧುರ್ಸ್ 2’ ಸಿನಿಮಾದ ಅರ್ಧ ಚಿತ್ರಕತೆ ಮುಗಿಸಿದ್ದೇನೆ. ಸಿನಿಮಾದ ಕತೆ ಪೂರ್ಣವಾದ ಬಳಿಕ ಜೂ ಎನ್ಟಿಆರ್ಗೆ ಕತೆ ಹೇಳುವಂತೆ ವಿವಿ ವಿನಾಯಕ್ ಹೇಳಿದ್ದಾರೆ ಎಂದು ಸಹ ಕೋನ ಹೇಳಿದ್ದಾರೆ. ಆದರೆ ಈಗ ಜೂ ಎನ್ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಮಾಸ್ ಅಪೀಲ್ ಇರುವ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಈಗ ಅವರು ಹಾಸ್ಯ ಪಾತ್ರದಲ್ಲಿ ನಟಿಸುತ್ತಾರಾ ಎಂಬುದೇ ಪ್ರಶ್ನೆ.
ಇದನ್ನೂ ಓದಿ:ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್ಟಿಆರ್-ಹೃತಿಕ್ ರೋಷನ್ ಜುಗಲ್ಬಂಧಿ
ಜೂ ಎನ್ಟಿಆರ್ ಪ್ರಸ್ತುತ, ಪ್ರಶಾಂತ್ ನೀಲ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಯಶ್ ರಾಜ್ ನಿರ್ಮಾಣದ ಹೊಸ ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತ್ರಿವಿಕ್ರಮ್ ಸಹ ಕತೆಯೊಂದನ್ನು ಜೂ ಎನ್ಟಿಆರ್ ಅವರಿಗೆ ಹೇಳಿದ್ದು, ಆ ಸಿನಿಮಾನಲ್ಲಿಯೂ ಜೂ ಎನ್ಟಿಆರ್ ನಟಿಸಬೇಕಿದೆ. ಇವುಗಳ ನಡುವೆ ಹಾಸ್ಯ ಪ್ರಧಾನ ಸಿನಿಮಾವನ್ನು ಜೂ ಎನ್ಟಿಆರ್ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಇದೆ. ಅಲ್ಲದೆ, ಈಗ ಜಾತಿಗಳ ಬಗ್ಗೆ ಹೆಚ್ಚಿನ ಸೂಕ್ಷ್ಮತೆ ಇರುವ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಹಾಸ್ಯ ಪಾತ್ರವನ್ನು ಜನ ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಇದೆ.
ಆದರೆ ಜೂ ಎನ್ಟಿಆರ್ಗೆ ‘ಅಧುರ್ಸ್’ ಸಿನಿಮಾ ಬಗ್ಗೆ ವಿಶೇಷ ಪ್ರೀತಿ ಇದೆ. ಜೂ ಎನ್ಟಿಆರ್ ಮಾತ್ರವಲ್ಲ, ಎಸ್ಎಸ್ ರಾಜಮೌಳಿ ಅವರಿಗೂ ಸಹ ‘ಅಧುರ್ಸ್’ ಮೆಚ್ಚಿನ ಸಿನಿಮಾ, ‘ಅಧುರ್ಸ್’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇದನ್ನೆಲ್ಲ ಪರಿಗಣಿಸಿ, ಜೂ ಎನ್ಟಿಆರ್ ‘ಅಧುರ್ಸ್ 2’ ಸಿನಿಮಾಕ್ಕೆ ಓಕೆ ಹೇಳಿದರೂ ಅಚ್ಚರಿ ಏನಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ