
ಪ್ರಭಾಸ್ (Prabhas) ನಟನೆಯ ‘ಫೌಜಿ’ ಚಿತ್ರದ ಚಿತ್ರೀಕರಣದ ವೇಳೆ ನಟರೊಬ್ಬರಿಗೆ ಕೀಟವೊಂದು ಕಚ್ಚಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕಲಾವಿದರ ಸಂಘ (ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್), ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದೆ. ಮಾತ್ರವಲ್ಲದೆ, ಅಸ್ವಸ್ಥ ನಟನಿಗೆ ಆರ್ಥಿಕ ಬೆಂಬಲ ಸಹ ನೀಡಬೇಕು ಎಂದು ಆಗ್ರಹಿಸಿದೆ.
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಫೌಜಿ’ ಸಿನಿಮಾದ ಚಿತ್ರೀಕರಣದಲ್ಲಿ ನಟ ರಾಜೇಶ್ ಶರ್ಮಾ ಭಾಗಿ ಆಗಿದ್ದರು. ಶೂಟಿಂಗ್ ಮುಗಿದ ನಂತರ ಈ ಘಟನೆ ನಡೆದಿದೆ ರಾಜೇಶ್ ಶರ್ಮಾ ಅವರು ದಟ್ಟವಾದ ಸಸ್ಯಗಳಿದ್ದ ಪ್ರದೇಶದಲ್ಲಿ ಸ್ಥಳೀಯ ತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದಾಗ ಕೀಟವೊಂದು ಅವರಿಗೆ ಕಚ್ಚಿದೆ. ಆಗ ಅದು ಗಂಭೀರವಾಗಿ ಕಂಡುಬರಲಿಲ್ಲವಾದ್ದರಿಂದ, ಅವರು ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದೆ ತಮ್ಮ ಕೆಲಸ ಮುಂದುವರಿಸಿದರು. ಆದರೆ ಕೆಲ ಗಂಟೆಗಳ ಬಳಿಕ ಅವರಿಗೆ ಜ್ವರ ಶುರುವಾಗಿದೆ. ಆದರೂ ಅವರು ವಿಮಾನದಲ್ಲಿ ಕೊಲ್ಕತ್ತಕ್ಕೆ ಹೊರಟಿದ್ದಾರೆ. ಅಲ್ಲಿ ಧಾಕುರಿಯಾದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜೇಶ್ ಅವರ ಕುಟುಂಬದ ಹೇಳಿಕೆಯ ಪ್ರಕಾರ, ಸೋಂಕು ಅವರ ಕಾಲ್ಬೆರಳುಗಳಿಂದ ಮೊಣಕಾಲಿನವರೆಗೆ ಹರಡಿದ್ದು, ಕೀಟ ಕಚ್ಚಿದ ಕಾಲಿನ ಮೇಲೆ ದೊಡ್ಡ ಗುಳ್ಳೆಗಳು ಉಂಟಾಗಿವೆ. ವೈದ್ಯರು ಅವರನ್ನು ನಿರಂತರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅಭಿಜಿತ್ ಭಟ್ಟಾಚಾರ್ಯ ಅವರು ಪರಿಸ್ಥಿತಿ ಹೇಗೆ ಮುಂದುವರಿಯುತ್ತದೆ ಎಂದು ಈಗಲೇ ಹೇಳುವುದು ಕಷ್ಟ ಎಂದಿದ್ದಾರೆ. “ರಾಜೇಶ್ ಇನ್ನೂ ತೀವ್ರ ನಿಗಾದಲ್ಲಿದ್ದಾರೆ ಮತ್ತು ಅಪಾಯದಿಂದ ಹೊರಬಂದಿಲ್ಲ. ರಕ್ತ ಹೆಪ್ಪುಗಟ್ಟುವಿಕೆ ಆಗಬಹುದೆಂಬ ಕಳವಳವಿದೆ, ಅದು ಶ್ವಾಸಕೋಶಕ್ಕೆ ಹೋದರೆ ಜೀವಕ್ಕೆ ಅಪಾಯವಾಗಬಹುದು” ಎಂದು ಹೇಳಿರುವುದಾಗಿ ಅವರ ಕುಟುಂಬದವರು ಹೇಳಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಸಿನಿಮಾಕ್ಕೆ ನೋ ಎಂದಿದ್ದ ಕೀರ್ತಿ ಸುರೇಶ್, ‘ಖುಷಿ ಇದೆ’ ಎಂದ ನಟಿ
ಈ ಘಟನೆಯ ನಂತರ, ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. AICWA ಅಧ್ಯಕ್ಷ ಸುರೇಶ್ ಶ್ಯಾಮ್‌ಲಾಲ್ ಗುಪ್ತಾ, ‘ಈ ಘಟನೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿತ್ರೀಕರಣದ ಸಮಯದಲ್ಲಿ ರಾಜೇಶ್ ಶರ್ಮಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ, ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಯು ಅವರನ್ನು ತಕ್ಷಣವೇ ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಗೆ ಏಕೆ ದಾಖಲಿಸಲಿಲ್ಲ? ಸೆಟ್‌ನಲ್ಲಿ ತುರ್ತು ವೈದ್ಯಕೀಯ ನೆರವು ಲಭ್ಯವಿದ್ದವೇ? ಎಲ್ಲಾ ಕಡ್ಡಾಯ ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಲಾಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿಯ ‘ಫೌಜಿ’ ಚಿತ್ರೀಕರಣದ ಸೆಟ್‌ನಲ್ಲಿ ನಡೆದ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ AICWA ಒತ್ತಾಯಿಸಿದೆ. ತನಿಖೆಗೆ ಆಗ್ರಹಿಸುವುದರ ಜೊತೆಗೆ, ರಾಜೇಶ್ ಶರ್ಮಾ ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ‘ಫೌಜಿ’ ಚಿತ್ರದ ನಿರ್ಮಾಪಕರು ಭರಿಸಬೇಕೆಂದು AICWA ಒತ್ತಾಯಿಸಿದೆ.
ರಾಜೇಶ್ ಶರ್ಮಾ ಅವರು ಹಿರಿಯ ನಟರಾಗಿದ್ದು ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಪ್ರಭಾಸ್ ನಟನೆಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ