ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ

Love and War movie: ಇತ್ತೀಚೆಗೆ ಬಾಲಿವುಡ್​​ನ ಸ್ಟಾರ್​​ ನಟರಾದ ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ನಟಿಸುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾದ ಸೆಟ್​​ನಲ್ಲಿ ಕಾರ್ಮಿಕರೊಬ್ಬರ ನಿಧನ ಹೊಂದಿದ್ದಾರೆ. ಇದೀಗ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಕಾರ್ಮಿಕ ಸಂಘಟನೆ ಆಗ್ರಹಿಸಿದೆ.

ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ
Low And War Movie

Updated on: Jun 24, 2026 | 1:04 PM

ಎಷ್ಟೆ ಆಧುನಿಕ ತಂತ್ರಜ್ಞಾನ, ಭದ್ರತಾ ಸೌಕರ್ಯಗಳು, ಕಾನೂನು, ನಿಯಮಗಳು ಬಂದರೂ ಸಹ ಸಿನಿಮಾ (Cinema) ಸೆಟ್​​ಗಳಲ್ಲಿ ಕಾರ್ಮಿಕರ ಸಾವುಗಳು ನಿಂತಿಲ್ಲ. ವರ್ಷಕ್ಕೆ ಐದಾರು ಮಂದಿಯಾದರೂ ಸೆಟ್​​ಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಲೇ ಬರುತ್ತಿದ್ದಾರೆ. ಭಾರಿ ಬಜೆಟ್​​ನ ದೊಡ್ಡ ನಿರ್ಮಾಣ ಸಂಸ್ಥೆಯ ಸೆಟ್​​ಗಳಲ್ಲೂ ಸಹ ಕಾರ್ಮಿಕರ ಸಾವು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಬಾಲಿವುಡ್​​ನ ಸ್ಟಾರ್​​ ನಟರಾದ ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ನಟಿಸುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾದ ಸೆಟ್​​ನಲ್ಲಿ ಕಾರ್ಮಿಕರೊಬ್ಬರ ನಿಧನ ಹೊಂದಿದ್ದಾರೆ. ಇದೀಗ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಕಾರ್ಮಿಕ ಸಂಘಟನೆ ಆಗ್ರಹಿಸಿದೆ.

‘ಲವ್ ಅಂಡ್ ವಾರ್’ ಚಿತ್ರೀಕರಣವು ಮುಂಬೈನಲ್ಲಿ ನಡೆಯುತ್ತಿದ್ದಾಗ, ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದ ಚಂದ್ರಧಾರಿ ಸಿಂಗ್ ಯಾದವ್ ಎಂಬ ಸಿಬ್ಬಂದಿಯೊಬ್ಬರು ಮೃತಪಟ್ಟರು. ಈಗ, ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದು, ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲು, ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಲು ಒತ್ತಾಯಿಸಿದೆ. ಜೊತೆಗೆ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ.

ಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಶಾಮ್‌ಲಾಲ್ ಗುಪ್ತಾ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರವನ್ನು, ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಈ ಘಟನೆಯು ಚಿತ್ರೀಕರಣದ ಸೆಟ್‌ಗಳಲ್ಲಿ ಕೆಲಸದ ಸ್ಥಳದ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರ ಕಳವಳವನ್ನು ಉಂಟುಮಾಡಿದೆ. ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ಅವರಂತಹ ಪ್ರಮುಖ ನಟರನ್ನು ಒಳಗೊಂಡ ದೊಡ್ಡ ಮಟ್ಟದ ನಿರ್ಮಾಣವಾಗಿದ್ದರೂ, ಸೆಟ್‌ನಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿಲ್ಲ, ಇದು ಕಾರ್ಮಿಕನ ದುರದೃಷ್ಟಕರ ಸಾವಿಗೆ ಕಾರಣವಾಯಿತು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು’ ಎಂದಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ

ಪತ್ರದಲ್ಲಿ ಸುರೇಶ್ ಅವರು ಮೃತರಿಗೆ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಕುಟುಂಬದ ಏಕೈಕ ಗಳಿಕೆಯ ಸದಸ್ಯರಾಗಿದ್ದರಿಂದ, ಅವರ ಸಾವು ಕುಟುಂಬಕ್ಕೆ ತೀವ್ರ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟವನ್ನು ಉಂಟುಮಾಡಿದೆ. ಹಾಗಾಗಿ ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒಕ್ಕೂಟವು ಆಗ್ರಹಿಸಿದೆ.

ಎಐಸಿಡಬ್ಲ್ಯೂಎ ಅಧ್ಯಕ್ಷರು ಬನ್ಸಾಲಿ ಅವರ ಚಿತ್ರಗಳ ಸೆಟ್‌ಗಳಲ್ಲಿ ಈ ಹಿಂದೆ ನಡೆದ ಅಪಘಾತಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ‘ಕಳೆದ ಹಲವು ವರ್ಷಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳ ಸೆಟ್‌ಗಳಲ್ಲಿ ಹಲವು ಗಂಭೀರ ಘಟನೆಗಳು ವರದಿಯಾಗಿವೆ. ‘ದೇವದಾಸ್’ ನಿರ್ಮಾಣದ ಸಮಯದಲ್ಲಿ ಕಾರ್ಮಿಕ ದಿನ್ದಯಾಳ್ ಯಾದವ್ ಮೃತಪಟ್ಟರು, ಇನ್ನೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡರು, ಮತ್ತು 2001 ರಲ್ಲಿ ಅದೇ ನಿರ್ಮಾಣದ ಸಮಯದಲ್ಲಿ ಸುಭಾಷ್ ಮೋರ್ಕರ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಪದ್ಮಾವತ್’ ಸಿನಿಮಾ ನಿರ್ಮಾಣದ ಸಮಯದಲ್ಲಿ 34 ವರ್ಷದ ಕಾರ್ಮಿಕ ಮುಖೇಶ್ ಡಕಿಯಾ ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ, ‘ಲವ್ ಅಂಡ್ ವಾರ್’ ನಿರ್ಮಾಣದ ಸಮಯದಲ್ಲಿ ಜೂನ್ 17, 2026 ರಂದು ಚಂದ್ರಧಾರಿ ಸಿಂಗ್ ಯಾದವ್ ಅವರು ಮೃತಪಟ್ಟಿದ್ದಾರೆ. ಹಾಗಾಗಿ ಅವರ ವಿರುದ್ಧ ಕೂಡಲೇ ಎಫ್​​ಐಆರ್ ದಾಖಲಿಸಬೇಕು, ಹಾಗೂ ಅವರ ಸಿನಿಮಾಗಳ ಸೆಟ್​​ನ ಸೇಫ್ಟಿ ಆಡಿಟ್ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us