ಅಜಿತ್​ ಕುಮಾರ್​ ನಟನೆಯ ಹೊಸ ಸಿನಿಮಾದ ಶೂಟಿಂಗ್​ ವೇಳೆ ಕಲಾ ನಿರ್ದೇಶಕ ಹೃದಯಾಘಾತದಿಂದ ನಿಧನ

ಹಿಂದಿನ ದಿನ ಶೂಟಿಂಗ್​ ಮುಗಿಸಿ ಹೋಟೆಲ್​ಗೆ ಬಂದಾಗ ಮಿಲನ್​ ಫರ್ನಾಂಡಿಸ್​ ಅವರು ನಾರ್ಮಲ್​ ಆಗಿದ್ದರು. ಭಾನುವಾರ ಬೆಳಗ್ಗೆ ಅವರ ದೇಹ ವಿಪರೀತ ಬೆವರಲು ಆರಂಭಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತು. ಆದರೆ ಆಸ್ಪತ್ರೆ ತಲುಪುವುದಕ್ಕೂ ಮುನ್ನ ಅವರು ನಿಧನರಾದರು ಎಂದು ವರದಿ ಆಗಿದೆ.

ಅಜಿತ್​ ಕುಮಾರ್​ ನಟನೆಯ ಹೊಸ ಸಿನಿಮಾದ ಶೂಟಿಂಗ್​ ವೇಳೆ ಕಲಾ ನಿರ್ದೇಶಕ ಹೃದಯಾಘಾತದಿಂದ ನಿಧನ
ಮಿಲನ್​ ಫರ್ನಾಂಡಿಸ್​, ಅಜಿತ್​ ಕುಮಾರ್​

Updated on: Oct 16, 2023 | 7:12 AM

ತಮಿಳು ಚಿತ್ರರಂಗದಿಂದ ಕಹಿ ಸುದ್ದಿ ಕೇಳಿಬಂದಿದೆ. ಅಜಿತ್​ ಕುಮಾರ್​ (Ajith Kumar) ಅವರು ನಟಿಸುತ್ತಿದ್ದ ಹೊಸ ಸಿನಿಮಾದ ಶೂಟಿಂಗ್​ ವೇಳೆ ಈ ದುರಂತ ನಡೆದಿದೆ. ‘ವಿದಾಮುಯರ್ಚಿ’ ಸಿನಿಮಾಗೆ ಕಲಾ ನಿರ್ದೇಶನ ಮಾಡುತ್ತಿದ್ದ ಮಿಲನ್​ ಫರ್ನಾಂಡಿಸ್​ ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಭಾನುವಾರ (ಅಕ್ಟೋಬರ್​ 15) ಅವರು ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ಈ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್​’ ನಿರ್ಮಿಸುತ್ತಿದೆ. ಮಿಲನ್​ ಫರ್ನಾಂಡಿಸ್​ (Milan Fernandez) ಅವರ ನಿಧನದ ಸುದ್ದಿಯನ್ನು ಈ ಸಂಸ್ಥೆ ಖಚಿತಪಡಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರತಂಡದವರು ಪ್ರಾರ್ಥಿಸಿದ್ದಾರೆ.

‘ವಿದಾಮುಯರ್ಚಿ’ ಚಿತ್ರಕ್ಕೆ ಅಕ್ಟೋಬರ್​ ಆರಂಭದಲ್ಲೇ ಶೂಟಿಂಗ್ ಶುರುವಾಗಿತ್ತು. ಖ್ಯಾತ ನಟ ಅಜಿತ್​ ಕುಮಾರ್​ ಅಭಿನಯಿಸುತ್ತಿರುವ ಈ ಸಿನಿಮಾಗೆ ಸದ್ಯ ಅಜರ್ಬೈಜಾನ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕಲಾ ನಿರ್ದೇಶನದ ಜವಾಬ್ದಾರಿಯನ್ನು ಮಿಲನ್​ ಫರ್ನಾಂಡಿಸ್​ ಅವರು ವಹಿಸಿಕೊಂಡಿದ್ದರು. ಆದರೆ ಕೆಲಸದಲ್ಲಿ ನಿರತವಾಗಿರುವಾಗಲೇ ಅವರಿಗೆ ಹೃದಯಾಘಾತ ಆಗಿದೆ. ಈ ಹಿಂದೆ ಕೂಡ ಅಜಿತ್​ ಕುಮಾರ್​ ನಟನೆಯ ಅನೇಕ ಸಿನಿಮಾಗಳಿಗೆ ಮಿಲನ್​ ಫರ್ನಾಂಡಿಸ್​ ಅವರು ಕಲಾ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: ಈ ಬ್ಲಡ್ ಗ್ರೂಪ್ ಹೊಂದಿರುವ ಜನರಲ್ಲಿ ಹೃದಯಾಘಾತದ ಅಪಾಯ ಹೆಚ್ಚು!

ಹಿಂದಿನ ದಿನ ಶೂಟಿಂಗ್​ ಮುಗಿಸಿ ಹೋಟೆಲ್​ಗೆ ಬಂದಾಗ ಮಿಲನ್​ ಫರ್ನಾಂಡಿಸ್​ ಅವರು ನಾರ್ಮಲ್​ ಆಗಿಯೇ ಇದ್ದರು. ಭಾನುವಾರ ಬೆಳಗ್ಗೆ ಅವರು ಕೆಲಸಕ್ಕಾಗಿ ಎಲ್ಲರನ್ನೂ ಒಂದೆಡೆ ಸೇರಿಸಿದರು. ನಂತರ ಅವರಿಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದು ಕಂಡುಬಂತು. ಅವರ ದೇಹ ವಿಪರೀತವಾಗಿ ಬೆವರಲು ಆರಂಭಿಸಿತು. ಕೂಡಲೇ ಪ್ರೊಡಕ್ಷನ್​ ಟೀಮ್​ನವರು ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡಹೋದರು. ಆದರೆ ಆಸ್ಪತ್ರೆ ತಲುಪುವುದಕ್ಕೂ ಮುನ್ನ ಮಿಲನ್​ ಫರ್ನಾಂಡಿಸ್​ ನಿಧನರಾದರು ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಬಾಗಲಕೋಟೆ: 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ನಿಧನ

‘ನಮ್ಮ ಕಲಾ ನಿರ್ದೇಶಕ ಮಿಲನ್​ ಫರ್ಮಾಂಡಿಸ್​ ಅವರ ನಿಧನಕ್ಕೆ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಮತ್ತು ಆಪ್ತರಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಲೈಕಾ ಪ್ರೊಡಕ್ಷನ್ಸ್​ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

‘ಬಿಲ್ಲ’, ‘ವೀರಂ’, ‘ತುನಿವು’, ‘ವೇದಳಾಂ’, ‘ಅಣ್ಣಾತೆ’, ‘ಪತ್ತು ತಲ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಲಾ ನಿರ್ದೇಶಕರಾಗಿ ಮಿಲನ್​ ಫರ್ನಾಂಡಿಸ್​ ಕೆಲಸ ಮಾಡಿದ್ದರು. ಅವರ ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us