
ಚಿತ್ರರಂಗದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ವಾರ್ಸ್ ಸಾಮಾನ್ಯ. ತೆಲುಗು ರಾಜ್ಯಗಳು ಮತ್ತು ತಮಿಳುನಾಡಿನಲ್ಲಿ ಇದು ತುಸು ಹೆಚ್ಚಾಗಿಯೇ ಇದೆ. ತಮಿಳಿನ ವಿಜಯ್ ಮತ್ತು ಅಜಿತ್ ಅಭಿಮಾನಿಗಳ ಬಗ್ಗೆ ಪದೇ ಪದೇ ಜಗಳ ನಡೆಯುತ್ತಲೇ ಇರುತ್ತದೆ. ಖುದ್ದು ವಿಜಯ್ ಮತ್ತು ಅಜಿತ್ ಸಹ ಪರಸ್ಪರ ದೂರವೇ ಇರುತ್ತಾರೆ. ಇಬ್ಬರ ನಡುವೆ ವೃತ್ತಿ ವೈರತ್ವ ಸಹಜವಾಗಿಯೇ ಇತ್ತು. ಕಳೆದ ಮೂರು ದಶಕದಿಂದಲೂ ಈ ಇಬ್ಬರು ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಆದರೆ ಇದೀಗ ವಿಜಯ್ ಮತ್ತು ಅಜಿತ್ ಒಟ್ಟಿಗೆ ಸೇರುತ್ತಿದ್ದಾರೆ. ಅದೂ ಭಾರತದಲ್ಲಿ ಅಲ್ಲ ಬದಲಿಗೆ ಬ್ರಿಟನ್ನಲ್ಲಿ.
ತಮಿಳುನಾಡು ಮುಖ್ಯಮಂತ್ರಿ ಮತ್ತು ತಮಿಳು ಸೂಪರ್‌ಸ್ಟಾರ್ ವಿಜಯ್ ಅವರು ಶನಿವಾರ ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆಯಲಿರುವ ಲೆ ಮಾನ್ಸ್ (Le Mans) ರೇಸ್‌ನಲ್ಲಿ ಸಾಂಪ್ರದಾಯಿಕ ಹಸಿರು ಧ್ವಜ (ಗ್ರೀನ್ ಫ್ಲ್ಯಾಗ್) ಹಾರಿಸುವ ಮೂಲಕ ರೇಸಿಗೆ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ ತಮಿಳಿನ ಸ್ಟಾರ್ ನಟ ಅಜಿತ್ ಅವರು ತಮ್ಮ ತಂಡದೊಂದಿಗೆ ಇದೇ ರೇಸ್‌ನಲ್ಲಿ ಸ್ಪರ್ಧಿಯಾಗಿ ಭಾಗಿ ಆಗಲಿದ್ದಾರೆ. ರೇಸ್‌ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ನಡುವೆ ಇದೆ ಎನ್ನಲಾದ ಪೈಪೋಟಿಯ ವದಂತಿಗಳ ಹೊರತಾಗಿಯೂ, 34 ವರ್ಷಗಳ ತಮ್ಮ ಸಹೋದ್ಯೋಗಿಯನ್ನು ಬಹಳ ಅಭಿಮಾನ ಮತ್ತು ಮೆಚ್ಚುಗೆಯಿಂದ ಸ್ಮರಿಸಿದರು. ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದಕ್ಕೆ ಅಜಿತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ರೇಸ್‌ಗೆ ವಿಜಯ್ ಆಗಮಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್, ‘ತಮ್ಮ ಬ್ಯುಸಿ ವೇಳಾಪಟ್ಟಿಯಿಂದ ಸಮಯ ಮಾಡಿಕೊಂಡು ಸಿಲ್ವರ್‌ಸ್ಟೋನ್‌ಗೆ ಬಂದು ನಮ್ಮನ್ನು ಭೇಟಿ ಮಾಡಲು ಬಂದಿರುವ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ನಾವು ಕಳೆದ 34 ವರ್ಷಗಳಿಂದ ಚಿತ್ರರಂಗದಲ್ಲಿ ಸಹೋದ್ಯೋಗಿಗಳಾಗಿದ್ದೇವೆ, ಅವರು ಈಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ’ ಎಂದಿದ್ದಾರೆ.
ಭವಿಷ್ಯದಲ್ಲಿ ಭಾರತದಲ್ಲಿಯೂ ಕ್ರೀಡಾಕೂಡಗಳು ನಡೆಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, “ಅವರು (ವಿಜಯ್) ಕೇವಲ ಮೋಟಾರ್‌ಸ್ಪೋರ್ಟ್ಸ್ ಮಾತ್ರವಲ್ಲದೆ, ಪ್ರತಿಯೊಂದು ವಿಭಾಗದ ಕ್ರೀಡೆಗಳನ್ನು ಉತ್ತೇಜಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರು ಮೋಟಾರ್‌ಸ್ಪೋರ್ಟ್ಸ್ ಮೇಲೂ ಗಮನ ಹರಿಸುತ್ತಿದ್ದಾರೆ. ಲೆ ಮಾನ್ಸ್ ಸೀರೀಸ್‌ನಂತಹ ರೇಸ್‌ಗಳನ್ನು ಭಾರತ ಮತ್ತು ಚೆನ್ನೈನಲ್ಲಿ ಆಯೋಜಿಸಲು ಲಾಜಿಸ್ಟಿಕ್ಸ್ ಮತ್ತು ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಏನೆಲ್ಲಾ ಬೇಕಾಗುತ್ತದೆ ಎಂಬುದನ್ನು ಖುದ್ದಾಗಿ ನೋಡಲು ಅವರು ಆಹ್ವಾನವನ್ನು ಸ್ವೀಕರಿಸಿ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಇಂತಹ ಕಾರ್ಯಕ್ರಮಗಳು ಭಾರತಕ್ಕೆ ಬರಬೇಕು ಮತ್ತು ನಾವೆಲ್ಲರೂ ಭಾರತದಲ್ಲೇ ರೇಸ್ ಮಾಡಬೇಕು ಎಂಬುದು ನನ್ನ ಆಸೆ’ ಎಂದರು.
ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನೆದುರು ಕತ್ತಿ ಬೀಸಿದ ವಿಜಯ್ ದೇವರಕೊಂಡ
ಅಜಿತ್ ಅವರು 1993 ರ ‘ಅಮರಾವತಿ’ ಚಿತ್ರದ ಮೂಲಕ ನಾಯಕರಾಗಿ ಪಾದರ್ಪಣೆ ಮಾಡಿದರು ಮತ್ತು ವಿಜಯ್ ಅವರು 1992 ರ ‘ನಾಲೈ ತೀರ್ಪು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದರು. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ, ಇಬ್ಬರ ಅಭಿಮಾನಿಗಳು ಇವರ ನಡುವಿನ ಪೈಪೋಟಿಯಿಂದ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಪರಸ್ಪರ ಜಗಳವಾಡುತ್ತಾ ಬಂದಿದ್ದಾರೆ. ವಿಜಯ್ ಅಭಿಮಾನಿಗಳನ್ನು ‘ಅನಿಲ್‌ಗಳು’ (ಅಳಿಲುಗಳು) ಮತ್ತು ಅಜಿತ್ ಅಭಿಮಾನಿಗಳನ್ನು ‘ಆಮೈಗಳು’ (ಆಮೆಗಳು) ಎಂದು ಪರಸ್ಪರ ಕುಚೋದ್ಯ ಮಾಡಲು ನಿಕ್‌ನೇಮ್‌ಗಳನ್ನು ಸಹ ಸೃಷ್ಟಿಸಿಕೊಂಡಿದ್ದರು.
ಆದರೆ ಈಗ ಇಬ್ಬರೂ ಒಂದಾಗುತ್ತಿದ್ದು, ಈ ಅಪರೂಪದ ಘಟನೆಯನ್ನು ನೋಡಲು ಸ್ಕಾಟ್‌ಲ್ಯಾಂಡ್, ಐರ್ಲೆಂಡ್, ವೇಲ್ಸ್ ಮತ್ತು ಇತರ ಹಲವು ಸ್ಥಳಗಳಿಂದ ಅಭಿಮಾನಿಗಳು ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ವಿಜಯ್ ಮತ್ತು ಅಜಿತ್ ಅವರುಗಳನ್ನು ಒಟ್ಟಿಗೆ ನೋಡಲೆಂದು ಹಲವಾರು ಅಭಿಮಾನಿಗಳು ರೇಸಿಗೆ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ