
ತೆಲುಗು ಚಿತ್ರರಂಗದ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರ ಕಿರಿಯ ಪುತ್ರ, ನಟ ಅಖಿಲ್ ಅಕ್ಕಿನೇನಿ (Akhil Akkineni) ಹಾಗೂ ಝೈನಬ್ ರೌಜಿ ವಿವಾಹ ಸಮಾರಂಭ ಇಂದು (ಜೂನ್ 06) ಹೈದರಾಬಾದ್ನಲ್ಲಿ ಬಲು ಅದ್ಧೂರಿಯಾಗಿ ನೆರವೇರಿದೆ. ನಾಗಾರ್ಜುನ ಅವರ ಜ್ಯೂಬ್ಲಿ ಹಿಲ್ಸ್ ನಿವಾಸದಲ್ಲಿಯೇ ಇಂದು ಬೆಳಿಗಿನ ಜಾವ 3 ಗಂಟೆಗೆ ಅಖಿಲ್ ಹಾಗೂ ಝೈನಬ್ ರೌಜಿ ಅವರ ವಿವಾಹ ಕುಟುಂಬ ಸದಸ್ಯರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ.
ಅಕ್ಕಿನೇನಿ ಅಖಿಲ್ ಮತ್ತು ಝೈನಬ್ ರೌಜಿ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಖಿಲ್ ಹಾಗೂ ಝೈನಬ್ ತಾವಿಬ್ಬರೂ ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಇಬ್ಬರ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಆಗಿದ್ದಾರೆ. ಆದರೆ ಇಬ್ಬರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಚಿತ್ರರಂಗದ ಹಲವು ಗಣ್ಯರು, ರಾಜಕಾರಣಿಗಳು ಭಾಗಿ ಆಗಲಿದ್ದಾರೆ.
ಜೂನ್ 5 ರಂದು ಅಖಿಲ್-ಝೈನಬ್ ವಿವಾಹಾರ್ಥ ಅದ್ಧೂರಿಯಾಗಿ ಬಾರಾತ್ ಮತ್ತು ಸಂಗೀತ್ ಕಾರ್ಯಕ್ರಮಗಳು ನಡೆದಿವೆ. ಕಾರ್ಯಕ್ರಮದಲ್ಲಿ ಅಖಿಲ್ ಅವರ ಸಹೋದರ ನಾಗ ಚೈತನ್ಯ ಮತ್ತು ಅವರ ಪತ್ನಿ ಶೋಭಿತಾ ಧುಲಿಪಾಲ ಸಕ್ರಿಯವಾಗಿ ಭಾಗವಹಿಸಿದ್ದರು. ತಮ್ಮನ ಮದುವೆಯಲ್ಲಿ ನಾಗ ಚೈತನ್ಯ ಸಖತ್ ಆಗಿ ಸ್ಟೆಪ್ ಸಹ ಹಾಕಿದರು. ಅಕ್ಕಿನೇನಿ ಕುಟುಂಬಕ್ಕೆ ಬಲು ಹತ್ತಿರದವರಾದ ಚಿರಂಜೀವಿ ಕುಟುಂಬದ ಕೆಲವು ಪ್ರಮುಖ ಸದಸ್ಯರು ಮದುವೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು. ನಟ ರಾಮ್ ಚರಣ್, ಉಪಾಸನಾ, ಚಿರಂಜೀವಿ ಅವರ ಪತ್ನಿ ಸುರೇಖ ಸಹ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು.
ಇದನ್ನೂ ಓದಿ:ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ
ಝೈನಬ್ ಖ್ಯಾತ ಉದ್ಯಮ ಕುಟುಂಬವಾದ ರೌಜಿ ಕುಟುಂಬದ ಮಗಳು. ಝೈನಬ್ ಸ್ವತಃ ಉದ್ಯಮಿ ಆಗಿರುವ ಜೊತೆಗೆ ಕಲಾವಿದೆ ಸಹ ಹೌದು. ಝೈನಬ್ ಅವರ ತಂದೆ ಜುಲ್ಫಿ ರೌಜಿ ಖ್ಯಾತ ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್ ಉದ್ಯಮಿ, ಜೈನಬ್ ಸಹೋದರ ಝೈನ್ ರೌಜಿ ಜೆಡ್ಆರ್ ರಿನೀವೆಬಲ್ಸ್ನ ಚೇರ್ಮನ್ ಮತ್ತು ಸಿಇಓ ಆಗಿದ್ದರು ಆದರೆ ಈಗ ಅದು ಬಂದ್ ಆಗಿದೆ. ಝೈನಬ್ ಚಿತ್ರಕಲಾವಿದೆ ಆಗಿದ್ದು ಮುಂಬೈನಲ್ಲಿ ‘ರಿಫ್ಲೆಕ್ಷನ್’ ಹೆಸರಿನಲ್ಲಿ ತಮ್ಮ ಕಲಾ ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಝೈನಬ್ ‘ಒನ್ಸ್ ಅಪಾನ್ ದಿ ಸ್ಕಿನ್’ ಹೆಸರಿನ ಇನ್ಸ್ಟಾಗ್ರಾಂ ಪೇಜ್ ಅನ್ನು ನಡೆಸುತ್ತಾರೆ. ಸ್ಕಿನ್ ಕೇರ್ ಬಗ್ಗೆ ಮಾಹಿತಿ ಮತ್ತು ಸ್ಕಿನ್ ಕೇರ್ ಉತ್ಪನ್ನಗಳ ಜಾಹೀರಾತು ಮಾಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Fri, 6 June 25