ಬಾಡಿಗಾರ್ಡ್ ತಳ್ಳಿ ಬೀಳಿಸಿದ್ದ ಅಭಿಮಾನಿಯನ್ನು ಭೇಟಿ ಮಾಡಿದ ಅಕ್ಕಿನೇನಿ ನಾಗಾರ್ಜುನ
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಸದಾ ಎಚ್ಚರಿಕೆಯಿಂದ ಇರಬೇಕು. ತಮ್ಮ ಜೊತೆಗೆ ಇರುವವರು ಮಾಡಿದ ತಪ್ಪಿಗೆ ತಾವು ಟೀಕೆ ಎದುರಿಸಬೇಕಾಗುತ್ತದೆ. ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಇತ್ತೀಚೆಗೆ ಅಂಥ ಸಂದರ್ಭ ಎದುರಾಗಿತ್ತು. ಅಭಿಮಾನಿಯೊಬ್ಬರನ್ನು ತಮ್ಮ ಬಾಡಿಗಾರ್ಡ್ ತಳ್ಳಿದ್ದಕ್ಕೆ ನಾಗಾರ್ಜುನ ಟ್ರೋಲ್ ಆಗಿದ್ದರು. ಆದರೆ ಈಗ ಅದೇ ಅಭಿಮಾನಿಯನ್ನು ನಾಗಾರ್ಜುನ ಭೇಟಿ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಆಗಿದ್ದು ಅವರ ಬಾಡಿಗಾರ್ಡ್ ವರ್ತನೆ. ಕಳೆದ ಭಾನುವಾರ (ಜೂನ್ 23) ಮುಂಬೈ ವಿಮಾನ ನಿಲ್ದಾಣದಲ್ಲಿ ನಾಗಾರ್ಜುನ ಅವರು ನಡೆದು ಬರುತ್ತಿರುವಾಗ ಅಭಿಮಾನಿಯೊಬ್ಬರು ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಆ ವ್ಯಕ್ತಿಯನ್ನು ನಾಗಾರ್ಜುನ ಅವರ ಬಾಡಿಗಾರ್ಡ್ ತಳ್ಳಿ ಬೀಳಿಸಿದ್ದರು. ಆ ವಿಡಿಯೋ ವೈರಲ್ (Nagarjuna Viral Video) ಆದ ಬಳಿಕ ನಾಗಾರ್ಜುನ ವಿರುದ್ಧ ನೆಟ್ಟಿಗರು ಗರಂ ಆಗಿದ್ದರು. ಆದರೆ ಈಗ ಆ ಅಭಿಮಾನಿಯನ್ನು ಸ್ವತಃ ನಾಗಾರ್ಜುನ ಅವರು ಹೋಗಿ ಭೇಟಿ ಮಾಡಿದ್ದಾರೆ. ಆ ಮೂಲಕ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಭಿಮಾನಿಯನ್ನು ಬಾಡಿಗಾರ್ಡ್ ತಳ್ಳಿ ಬೀಳಿಸಿದಾಗ ಅದು ನಾಗಾರ್ಜುನ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ವೈರಲ್ ಆದ ನಂತರ ಅವರಿಗೆ ಆ ಬಗ್ಗೆ ತಿಳಿಯಿತು. ಈಗ ಮತ್ತೆ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಂದು ಕೆಳಗೆ ಬಿದ್ದ ಅಭಿಮಾನಿಯನ್ನು ಇಂದು (ಜೂನ್ 26) ನಾಗಾರ್ಜುನ ಮಾತನಾಡಿಸಿದ್ದಾರೆ. ಆ ವ್ಯಕ್ತಿಯನ್ನು ತಬ್ಬಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
ಇಷ್ಟೆಲ್ಲ ಟೀಕೆ ಎದುರಾಗಿದ್ದಕ್ಕೆ ಆ ಅಭಿಮಾನಿಯು ನಾಗಾರ್ಜುನ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ‘ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ’ ಎಂದು ನಾಗಾರ್ಜುನ ಅವರು ಸಮಾಧಾನ ಮಾಡಿದ್ದಾರೆ. ಅಲ್ಲದೇ ಅಭಿಮಾನಿಯ ಜೊತೆ ಅವರು ಕೆಲ ಕಾಲ ಮಾತುಕಥೆ ನಡೆಸಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಇದಕ್ಕೆ ಜನರಿಂದ ಸಖತ್ ಪಾಸಿಟಿವ್ ಕಮೆಂಟ್ಗಳು ಬರುತ್ತಿವೆ.
View this post on Instagram
‘ನಾಗಾರ್ಜುನ ನಿಜವಾದ ಸ್ಟಾರ್. ಅವರು ಎಷ್ಟು ವಿನಮ್ರವಾಗಿ ನಡೆದುಕೊಂಡಿದ್ದಾರೆ ನೋಡಿ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ಇದೆಲ್ಲ ಆಗಿದ್ದು ಪಾಸಿಟಿವ್ ಆಗಿರುವ ಸೋಶಿಯಲ್ ಮೀಡಿಯಾದ ಕಾರಣದಿಂದ’ ಎಂದು ಕೂಡ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ನಾಗಾರ್ಜುನ ಅವರು ಪುನಃ ವಿಮಾನ ನಿಲ್ದಾಣಕ್ಕೆ ತೆರಳಿ ಆ ವ್ಯಕ್ತಿಯನ್ನು ಭೇಟಿ ಮಾಡಿದ್ದು ಎಲ್ಲರಿಗೂ ಸಮಾಧಾನ ತಂದಿದೆ.
ಇದನ್ನೂ ಓದಿ: ಹೈದರಾಬಾದ್ಗೆ ಬಂದ ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ಅಕ್ಕಿನೇನಿ ನಾಗಾರ್ಜುನ; ಧನ್ಯವಾದ ಹೇಳಿದ ನಟಿ
ಅಂದು ಘಟನೆ ನಡೆದ ಬಳಿಕ ನಾಗಾರ್ಜುನ ಟ್ವೀಟ್ ಮಾಡಿದ್ದರು. ‘ಈಗತಾನೇ ಇದು ನನ್ನ ಗಮನಕ್ಕೆ ಬಂದಿದೆ. ಹೀಗೆ ಆಗಬಾರದಿತ್ತು. ಆ ವ್ಯಕ್ತಿಯ ಬಳಿ ನಾನು ಕ್ಷಮೆ ಕೇಳುವೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುತ್ತೇನೆ. ಇನ್ನೆಂದೂ ಈ ರೀತಿ ಆಗುವುದಿಲ್ಲ’ ಎಂದು ನಾಗಾರ್ಜುನ ಭರವಸೆ ನೀಡಿದ್ದರು. ಆ ಮಾತಿಗೆ ತಕ್ಕಂತೆಯೇ ಅವರು ಇಂದು ನಡೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.