ಒಂದೇ ಸಿನಿಮಾಕ್ಕೆ ವಿಲನ್ ಪಾತ್ರ ಸಾಕಾಯ್ತ ನಾಗಾರ್ಜುನ್​ಗೆ?

Akkineni Nagarjuna: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಅಕ್ಕಿನೇನಿ ನಾಗಾರ್ಜುನ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಅದಕ್ಕೆ ಮುಂಚೆ ಬಿಡುಗಡೆ ಆದ ಧನುಶ್ ನಟನೆಯ ‘ಕುಬೇರ’ ಸಿನಿಮಾನಲ್ಲಿ ಅವರದ್ದು ಪ್ರಮುಖ ಪೋಷಕ ಪಾತ್ರ. ಇದೀಗ ನಾಗಾರ್ಜುನ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದು ಅದರಲ್ಲಿ ಅವರೇ ನಾಯಕನಂತೆ.

ಒಂದೇ ಸಿನಿಮಾಕ್ಕೆ ವಿಲನ್ ಪಾತ್ರ ಸಾಕಾಯ್ತ ನಾಗಾರ್ಜುನ್​ಗೆ?
Akkineni Nagarjuna

Updated on: Aug 20, 2025 | 7:42 PM

ಅಕ್ಕಿನೇನಿ ನಾಗಾರ್ಜುನ (Nagarjuna) ಟಾಲಿವುಡ್​ನ ಸ್ಟಾರ್ ನಟರಲ್ಲಿ ಒಬ್ಬರು. ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪುತ್ರ ನಾಗಾರ್ಜುನ ತಮ್ಮ ಅಂದದಿಂದ ಲಕ್ಷಾಂತರ ಮಹಿಳೆಯರ ಹೃದಯ ದೋಚಿದ್ದವರು. ನಾಗಾರ್ಜುನ ಭಾರತದ ಸುಂದರ ನಾಯಕ ನಟರಲ್ಲಿ ಒಬ್ಬರಾಗಿದ್ದವರು. ಈಗಲೂ ಅವರನ್ನು ‘ಮನ್ಮಥ’ ಎಂದೇ ಅಭಿಮಾನಿಗಳು ಕರೆಯುವುದುಂಟು. ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ನಾಗಾರ್ಜುನ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಒಂದೇ ಸಿನಿಮಾಕ್ಕೆ ಅವರಿಗೆ ವಿಲನ್ ಪಾತ್ರ ಸಾಕೆನಿಸಿದಂತಿದೆ.

‘ಕೂಲಿ’ ಸಿನಿಮಾನಲ್ಲಿ ಸೈಮನ್ ಹೆಸರಿನ ವಿಲನ್ ಪಾತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ನಟಿಸಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಆದರೆ ಕೇವಲ ಒಂದೇ ಸಿನಿಮಾಕ್ಕೆ ಅವರಿಗೆ ವಿಲನ್ ಪಾತ್ರ ಸಾಕೆನಿಸಿದಂತಿದೆ. ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಾಗಾರ್ಜುನ, ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ತಾವು ಮುಂದಿನ ಸಿನಿಮಾನಲ್ಲಿ ವಿಲನ್ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಹಿರಿಯ ನಟ ಜಗಪತಿ ಬಾಬು ನಡೆಸಿಕೊಡುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ನಟ ನಾಗಾರ್ಜುನ, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದರು. ನಾಗಾರ್ಜುನ ಅವರ ಮುಂದಿನ ಸಿನಿಮಾ ಅವರ 100ನೇ ಸಿನಿಮಾ ಆಗಿರಲಿದೆ. ಹಾಗಾಗಿ ಆ ಸಿನಿಮಾ ಬಹಳ ವಿಶೇಷ ಎಂದೂ ಸಹ ನಾಗಾರ್ಜುನ ಹೇಳಿದ್ದಾರೆ. ‘ನನ್ನ ಮುಂದಿನ ಸಿನಿಮಾ ಫ್ಯಾಮಿಲಿ ಎಂಟರ್ಟೈನರ್ ಆಗಿರಲಿದೆ. ಆಕ್ಷನ್ ಸಹ ಸಿನಿಮಾನಲ್ಲಿ ಇರಲಿದೆ. ಅಂದಹಾಗೆ ಆ ಸಿನಿಮಾನಲ್ಲಿ ನಾನು ನಾಯಕನಾಗಿಯೇ ಇರಲಿದ್ದೀನಿ’ ಎಂದು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ:‘ಕೂಲಿ’ ಸಿನಿಮಾ ಮೂಲಕ ರಚಿತಾ ರಾಮ್​ಗೆ ಈಡೇರಿತು ಹಲವು ವರ್ಷಗಳ ವಿಚಿತ್ರ ಕನಸು

ರಾ ಕಾರ್ತಿಕ್ ಎಂಬುವರು ನಾಗಾರ್ಜುನ ಅವರ 100ನೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ‘ಕಾರ್ತಿಕ್ ನನಗೆ ಕತೆ ಹೇಳಿ ಒಂದು ವರ್ಷವಾಗಿದೆ. ಆ ಕತೆ ನನಗೆ ಬಹಳ ಇಷ್ಟವಾಯ್ತು. ಅದೇ ನನ್ನ 100ನೇ ಸಿನಿಮಾ ಆಗಬೇಕು ಎಂಬ ಆಸೆಯೂ ನನಗೆ ಇತ್ತು. ಇದೀಗ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾದ ನಿರ್ಮಾಣ ಆಗಲಿದೆ’ ಎಂದಿದ್ದಾರೆ ನಾಗಾರ್ಜುನ.

ನಾಗಾರ್ಜುನ ‘ಕೂಲಿ’ ಸಿನಿಮಾನಲ್ಲಿ ನಟಿಸುವುದಕ್ಕೆ ಮೊದಲು ಧನುಶ್ ನಟನೆಯ ‘ಕುಬೇರ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿಯೂ ಅವರದ್ದು ಒಂದು ರೀತಿ ವಿಲನ್ ಪಾತ್ರದಂತೆಯೇ ಇತ್ತು. ಆ ಸಿನಿಮಾನಲ್ಲಿ ಧನುಶ್ ನಾಯಕ, ನಾಗಾರ್ಜುನ ಪೋಷಕ ಪಾತ್ರ ಎಂದೇ ಅಭಿಮಾನಿಗಳು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ನಾಗಾರ್ಜುನ ಈಗ ತಮ್ಮ ಮುಂದಿನ ಸಿನಿಮಾನಲ್ಲಿ ತಾವೇ ನಾಯಕ ಎಂದು ಒತ್ತಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Wed, 20 August 25

Follow Us