ಅಲ್ಲು ಅರ್ಜುನ್ ಜೀವನ ಬದಲಿಸಿದ್ದು ಚಿರಂಜೀವಿಯ ಒಂದು ಮಾತು
Allu Arjun Birthday: ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಅಲ್ಲು ಅರ್ಜುನ್ ಮೊದಲ ಸಿನಿಮಾ ಬಿಡುಗಡೆ ಆಗಿ ಹಿಟ್ ಆದರೂ ಅಲ್ಲು ಅರ್ಜುನ್ ತೀವ್ರ ಟೀಕೆ, ವ್ಯಂಗ್ಯಕ್ಕೆ ಗುರಿ ಆಗಿದ್ದರು. ಆದರೆ ಆ ಬಳಿಕ ಮೆಗಾಸ್ಟಾರ್ ಚಿರಂಜೀವಿ ಹೇಳಿದ ಒಂದು ಮಾತಿನಿಂದ ಅವರ ಭವಿಷ್ಯವೇ ಬದಲಾಯ್ತು. ಈಗ ಇರುವ ಹಂತಕ್ಕೆ ಬಂದು ನಿಲ್ಲಲು ಸಾಧ್ಯವಾಯ್ತು.

ಇಂದು ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬ. ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್. ಪ್ರಸ್ತುತ ಇಡೀ ದೇಶದಲ್ಲೇ ಅವರಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ನಟ ಇನ್ನೊಬ್ಬರಿಲ್ಲ. ‘ಪುಷ್ಪ 2’ ಸಿನಿಮಾಕ್ಕೆ ಅವರು ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಅಲ್ಲು ಅರ್ಜುನ್ ಮೊದಲ ಸಿನಿಮಾ ಮಾಡಿದಾಗ, ಸಿನಿಮಾ ಹಿಟ್ ಅದರೂ ಸರಣಿ ಟೀಕೆಗಳನ್ನು ಎದುರಿಸಿದ್ದರು. ಅವರ ಮುಂದೆ ಎರಡು ಆಯ್ಕೆಗಳಿದ್ದಾಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಹೇಳಿದ ಒಂದು ಮಾತು ಅವರನ್ನು ಈಗಿರುವ ಹಂತಕ್ಕೆ ತಂದು ನಿಲ್ಲಿಸಿತು.
ಅಲ್ಲು ಅರ್ಜುನ್ ಮೊದಲ ಸಿನಿಮಾ ‘ಗಂಗೋತ್ರಿ’ ಆ ಸಿನಿಮಾದಲ್ಲಿ, ನಿಕ್ಕರ್, ಶರ್ಟ್, ಹೆಗಲ ಮೇಲೆ ಟವಲ್ ಹಾಕಿಕೊಂಡು ಹದಿ ಹರೆಯದ ಯುವಕನ ಪಾತ್ರದಲ್ಲಿ ಅಲ್ಲು ನಟಿಸಿದ್ದರು. ಹಾಡುಗಳು ಇನ್ನಿತರೆ ಕಾರಣಕ್ಕೆ ಸಿನಿಮಾಕ್ಕೆ ಹಿಟ್ ಆಯಿತಾದರೂ ಅಲ್ಲು ಅರ್ಜುನ್ ಲುಕ್ಸ್ ಬಗ್ಗೆ ತೀವ್ರ ಟೀಕೆ ಎದುರಾಗಿತ್ತು. ಮುಖದಲ್ಲಿ ಮೀಸೆ ಇಲ್ಲ, ದಟ್ಟ ಹುಬ್ಬು, ಯುವತಿಯರಂತೆ ತಲೆ ಆಡಿಸುತ್ತಾ ಮಾತನಾಡುವ ರೀತಿಯ ಬಗ್ಗೆ ಹಾಸ್ಯ ಮಾಡಲಾಗಿತ್ತು.
ಹಾಗಾಗಿ ಅಲ್ಲು ಅರ್ಜುನ್ ಅವರ ಎರಡನೇ ಸಿನಿಮಾ ಆಕ್ಷನ್ ಸಿನಿಮಾ ಆಗಿರಬೇಕು, ಆಗ ಚಾಲ್ತಿಯಲ್ಲಿದ್ದ ಜೂ ಎನ್ಟಿಆರ್, ಪ್ರಭಾಸ್ ರೀತಿ ಮಾಸ್ ಕತೆಗಳ ಹುಡುಕಾಟದಲ್ಲಿದ್ದರು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್. ಅದೇ ಸಮಯದಲ್ಲಿ ಸುಕುಮಾರ್ ‘ಆರ್ಯ’ ಕತೆ ಹಿಡಿದುಕೊಂಡು ಬಂದಿದ್ದರು. ಅಲ್ಲು ಅರವಿಂದ್, ಸುಕುಮಾರ್ ಅನ್ನು ಚಿರಂಜೀವಿ ಬಳಿ ಕತೆ ಹೇಳಲು ಕಳಿಸಿದರು. ಸುಕುಮಾರ್ ಅಲ್ಲಿಯ ವರೆಗೆ ಒಂದೂ ಸಿನಿಮಾ ಮಾಡಿರಲಿಲ್ಲ. ಯಾರಿಗೂ ಸಹಾಯಕನಾಗಿಯೂ ದುಡಿದಿರಲಿಲ್ಲ.
ಚಿರಂಜೀವಿ ಮುಂದೆ ಕೂತು ಅಳುಕಿನಿಂದಲೇ ಕತೆ ಹೇಳಿದರು ಸುಕುಮಾರ್. ಕೂಡಲೇ ಅಲ್ಲು ಅರವಿಂದ್ಗೆ ಕರೆ ಮಾಡಿದ ಚಿರಂಜೀವಿ ಕತೆ ಚೆನ್ನಾಗಿದೆ ಎಂದರು, ಆದರೆ ಅಲ್ಲು ಅರವಿಂದ್, ಹುಡುಗ ಹೊಸಬ, ಇನ್ನೂ ಯಾವ ಸಿನಿಮಾ ಅನ್ನು ಮಾಡಿಲ್ಲ ಎಂದು ಹೇಳಿದರಂತೆ. ಅಲ್ಲು ಅರವಿಂದ್ ಹೇಳುತ್ತಿದ್ದ ಮಾತು ಎದುರಿಗೇ ಕೂತಿದ್ದ ಸುಕುಮಾರ್ಗೂ ಕೇಳುತ್ತಿತ್ತಂತೆ. ಆಗ ಚಿರಂಜೀವಿ, ‘ಹುಡುಗ ಎಷ್ಟು ಚೆನ್ನಾಗಿ ಕತೆ ಹೇಳುತ್ತಿದ್ದಾನೆಂದರೆ ಕ್ಯಾಮೆರಾ ಮನ್ ಕೂಡ ಸಿನಿಮಾ ಮಾಡಿಬಿಡಬಲ್ಲ, ಅವಕಾಶ ಕೊಡಬಹುದು’ ಎಂದರಂತೆ.
ಇದನ್ನೂ ಓದಿ:ಕ್ಯೂಟ್ ವಿಡಿಯೋ ಹಂಚಿಕೊಂಡು ಪತಿಗೆ ವಿಶ್ ಮಾಡಿದ ಅಲ್ಲು ಅರ್ಜುನ್ ಪತ್ನಿ
ಚಿರಂಜೀವಿ ಮಾತಿಗೆ ಎದುರು ಮಾತನಾಡದೆ ಅಲ್ಲು ಅರವಿಂದ್ ಸಹ ಓಕೆ ಹೇಳಿದ್ದಾರೆ. ಆಮೇಲೆ ನಡೆದಿದ್ದೆಲ್ಲ ಇತಿಹಾಸ. ‘ಆರ್ಯ’ ಸಿನಿಮಾಕ್ಕೆ ಮೊದಲಿಗೆ ಅಲ್ಲು ಅರ್ಜುನ್ ಲುಕ್ ಬದಲಿಸಿದ ಸುಕುಮಾರ್, ತೆಲುಗು ಚಿತ್ರರಂಗದಲ್ಲಿ ಯಾರೂ ತೆಗೆಯದಂತೆ ಪ್ರೇಮಕತೆ ತೆಗೆದುಬಿಟ್ಟರು. ಈಗಲೂ ಸಹ ‘ಆರ್ಯ’ ಕಲ್ಟ್ ಕ್ಲಾಸಿಕ್. ‘ಆರ್ಯ’ ಬಳಿಕ ಅಲ್ಲು ಅರ್ಜುನ್ ಮುಟ್ಟಿದ್ದೆಲ್ಲವೂ ಚಿನ್ನ. ‘ಗಂಗೋತ್ರಿ’ ಬಳಿಕ ಅವರನ್ನು ಆಡಿಕೊಂಡವರೇ ಅಲ್ಲು ಅರ್ಜುನ್ ಮುಂದೆ ಚೆಕ್ ಹಿಡಿದು ಡೇಟ್ಸ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ