
ನಟ ಅಲ್ಲು ಅರ್ಜುನ್ (Allu Arjun) ಅವರು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ‘ಪುಷ್ಪ 2’ ಸಿನಿಮಾದಿಂದ ಭಾರಿ ಗೆಲುವು ಕಂಡಿರುವ ಅಲ್ಲು ಅರ್ಜುನ್ ಹಾಗೂ ‘ಜವಾನ್’ ಸಿನಿಮಾದಿಂದ ಜಯಭೇರಿ ಬಾರಿಸಿರುವ ಅಟ್ಲಿ (Atlee) ಅವರು ಒಂದಾಗಿ ಸಿನಿಮಾ ಮಾಡುತ್ತಾರೆ ಎಂದಾಗಲೇ ಪ್ರೇಕ್ಷಕರ ನಿರೀಕ್ಷೆ ಜೋರಾಗಿತ್ತು. ಈಗ ಅವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಮುಂಬೈನಲ್ಲಿ ಜೂನ್ 11ರಂದು ಮುಹೂರ್ತ ನಡೆದಿದೆ. ಇದರಲ್ಲಿ ಅಲ್ಲು ಅರ್ಜುನ್, ಅಟ್ಲಿ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿಲ್ಲ. ತಾತ್ಕಾಲಿಕವಾಗಿ ‘AA22xA6’ ಎಂದು ಕರೆಯಲಾಗುತ್ತಿದೆ. ಪಾತ್ರವರ್ಗದ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲು ಅರ್ಜುನ್ ಜೊತೆ ದೀಪಿಕಾ ಪಡುಕೋಣೆ ಅಭಿನಯಿಸುತ್ತಾರೆ ಎಂಬುದಷ್ಟೇ ಖಚಿತವಾಗಿದೆ. ಇನ್ನುಳಿದ ಪಾತ್ರಧಾರಿಗಳ ಬಗ್ಗೆ ಮುಂದಿನ ದಿನಗಳಲ್ಲಿ ಸುದ್ದಿ ಸಿಗಲಿದೆ.
ವರದಿಗಳ ಪ್ರಕಾರ, ಜೂನ್ 12ರಿಂದ ‘AA22xA6’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇಷ್ಟು ದಿನಗಳ ಕಾಲ ಭರ್ಜರಿಯಾಗಿ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಲಾಗಿದೆ. ಸಾಕಷ್ಟು ತಯಾರಿಯೊಂದಿಗೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಅವರು ಸಿನಿಮಾದ ಶೂಟಿಂಗ್ ಆರಂಭಿಸುತ್ತಿದ್ದಾರೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ತಯಾರಾಗಲಿದೆ. ಅದಕ್ಕಾಗಿ ವಿದೇಶದ ತಂತ್ರಜ್ಞರು ಕೂಡ ತೆರೆಹಿಂದೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ತ್ರಿಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ವಿಎಫ್ಎಕ್ಸ್ ದೃಶ್ಯಗಳು ಹೇರಳವಾಗಿ ಇರಲಿವೆ. ಈ ಎಲ್ಲ ಕಾರಣದಿಂದಾಗಿ ಅಲ್ಲು ಅರ್ಜುನ್ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಜಾಸ್ತಿ ಆಗಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್-ಅಟ್ಲಿ ಚಿತ್ರಕ್ಕೆ ದೀಪಿಕಾ ಎಂಟ್ರಿ ಅಧಿಕೃತ; ಪ್ರೋಮೋ ರಿಲೀಸ್
ಸನ್ ಪಿಕ್ಚರ್ಸ್ ಸಂಸ್ಥೆಯು ‘AA22xA6’ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಅಂದಾಜು 700 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಅವರ ಗೆಟಪ್ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾತರರಾಗಿದ್ದಾರೆ. ದೀಪಿಕಾ ಪಡುಕೋಣೆ ಅವರು ಸ್ವಲ್ಪ ದಿನಗಳ ಬಳಿಕ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.