ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಅಲ್ಲು ಅರ್ಜುನ್; ಮುಂದಿದೆ ದೊಡ್ಡ ಸವಾಲು
2003ರಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಅವರು ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ 22 ವರ್ಷಗಳನ್ನು ಪೂರೈಸಿದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ‘ಪುಷ್ಪ 2’ ಸಿನಿಮಾದಿಂದ ಹಲವು ಹೊಸ ದಾಖಲೆ ಮಾಡಿರುವ ಅಲ್ಲು ಅರ್ಜುನ್ ಅವರು ಮುಂದಿನ ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ನಟ ಅಲ್ಲು ಅರ್ಜುನ್ (Allu Arjun) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 22 ವರ್ಷ ಕಳೆದಿದೆ. ಬಣ್ಣದ ಲೋಕ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಹಲವು ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲುವುದು ಸುಲಭವಲ್ಲ. ಅಲ್ಲು ಅರ್ಜುನ್ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ (Allu Arjun Family). ಹಾಗಾಗಿ ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತು. ಆದರೆ ಇಂದು ಅವರು ಸಂಪಾದಿಸಿರುವ ಹೆಸರು ಮತ್ತು ಜನರ ಪ್ರೀತಿ ಸಿಕ್ಕಿದ್ದು ಅಷ್ಟು ಸುಲಭವಾಗಿ ಅಲ್ಲ. ಸಾಕಷ್ಟು ಪರಿಶ್ರಮದಿಂದ ಅಲ್ಲು ಅರ್ಜುನ್ ಅವರು ಈ ಹಂತಕ್ಕೆ ಬಂದು ನಿಂತಿದ್ದಾರೆ. ಈಗಂತೂ ಅವರ ಎದುರು ದೊಡ್ಡ ಸವಾಲು ಇದೆ.
ಅಲ್ಲು ಅರ್ಜುನ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಗಂಗೋತ್ರಿ’ 2003ರಲ್ಲಿ ಬಿಡುಗಡೆ ಆಯಿತು. ಆ ಚಿತ್ರಕ್ಕೆ ಕೆ. ರಾಘವೇಂದ್ರ ರಾವ್ ಅವರು ನಿರ್ದೇಶನ ಮಾಡಿದ್ದರು. ಮರುವರ್ಷ ಸುಕುಮಾರ್ ನಿರ್ದೇಶನ ಮಾಡಿದ ‘ಆರ್ಯ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದರು. ಆ ಚಿತ್ರ ಸೂಪರ್ ಹಿಟ್ ಆಯಿತು. ಬಳಿಕ ಅಲ್ಲು ಅರ್ಜುನ್ ಅವರು ಯಶಸ್ಸಿನ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತುತ್ತಾ ಬಂದರು.
2021ರಲ್ಲಿ ಬಿಡುಗಡೆ ಆದ ‘ಪುಷ್ಪ’ ಸಿನಿಮಾದಿಂದ ಅಲ್ಲು ಅರ್ಜುನ್ ಅವರ ಇಮೇಜ್ ಬದಲಾಯಿತು. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಸುಕುಮಾರ್ ಅವರು ತುಂಬಾ ಅದ್ದೂರಿಯಾಗಿ ಆ ಚಿತ್ರವನ್ನು ಕಟ್ಟಿಕೊಟ್ಟರು. ಬಳಿಕ 2024ರಲ್ಲಿ ಬಂದ ‘ಪುಷ್ಪ 2’ ಸಿನಿಮಾ ಹಲವು ದಾಖಲೆಗಳನ್ನು ಮಾಡಿತು. ಈ ಚಿತ್ರದಿಂದಾಗಿ ವಿಶ್ವಮಟ್ಟದಲ್ಲಿ ಅಲ್ಲು ಅರ್ಜುನ್ ಅವರ ಹೆಸರು ಕೇಳಿಸುವಂತಾಯಿತು.
ಅಲ್ಲು ಅರ್ಜುನ್ ಅವರಿಗೆ ‘ಪುಷ್ಪ’ ಸಿನಿಮಾದ ನಟನೆಗಾಗಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಟಾಲಿವುಡ್ನಲ್ಲಿ ಈ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಹಾಗಾಗಿ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಇನ್ನು, ‘ಪುಷ್ಪ 2’ ಸಿನಿಮಾ ಮಾಡಿದ ಮೋಡಿ ಸಣ್ಣದೇನಲ್ಲ. ಈಗ ಅಲ್ಲು ಅರ್ಜುನ್ ಅವರು ನಟಿಸುವ ಮುಂದಿನ ಸಿನಿಮಾ ಮೇಲೆ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಬೇಕಿರುವುದೇ ಅಲ್ಲು ಅರ್ಜುನ್ ಮುಂದಿರುವ ದೊಡ್ಡ ಸವಾಲು.
ಇದನ್ನೂ ಓದಿ: ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲು, ಮುಂದಿನ ಸಿನಿಮಾ ಸಂಭಾವನೆ ಎಷ್ಟು ಗೊತ್ತೆ?
ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಅವರು ಕೈ ಜೋಡಿಸುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್ನ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.