‘ಕ್ರಿಶ್ 4’ ಮಹತ್ವದ ಅಪ್ಡೇಟ್, ನಿರ್ದೇಶಕನಾಗಿ ಬದಲಾದ ಸೂಪರ್ ಸ್ಟಾರ್ ನಟ
Hritik Roshan: ‘ಕ್ರಿಶ್’, ಭಾರತದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಸೂಪರ್ ಹೀರೋ ಸಿನಿಮಾ ಸರಣಿ. ಇದೀಗ ‘ಕ್ರಿಶ್ 4’ ಸಿನಿಮಾದ ನಿರ್ಮಾಣದ ಬಗ್ಗೆ ಚರ್ಚೆ ಚಾಲ್ತಿಯಲ್ಲಿದ್ದು, ಇದೀಗ ಮಹತ್ವದ ಅಪ್ಡೇಟ್ ಒಂದು ಹೊರಬಿದ್ದಿದೆ. ಸೂಪರ್ ಸ್ಟಾರ್ ನಟರೊಬ್ಬರು ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಲಿದೆ.

ಭಾರತೀಯ ಚಿತ್ರರಂಗದ (Indian Cinema) ಮೊಟ್ಟ ಮೊದಲ ಸೂಪರ್ ಹೀರೋ ಸಿನಿಮಾ ‘ಕ್ರಿಶ್ 4’. ಅದಕ್ಕೆ ಮುಂಚೆ ಕೆಲವು ಸಿನಿಮಾಗಳು ಬಂದಿದ್ದವಾದರೂ ವಿಶೇಷ ಶಕ್ತಿಯ, ಆಧುನಿಕ ವಿಎಫ್ಎಕ್ಸ್ ಬಳಸಿಕೊಂಡು ನಿರ್ಮಿಸಲಾದ ಮೊದಲ ಸಿನಿಮಾ ‘ಕ್ರಿಶ್’ ಆಗಿತ್ತು. ಹೃತಿಕ್ ರೋಷನ್ ಕ್ರಿಶ್ ಪಾತ್ರದಲ್ಲಿ ನಟಿಸಿದ್ದರು. ಅವರ ತಂದೆ ರಾಕೇಶ್ ರೋಷನ್ ಸಿನಿಮಾದ ನಿರ್ದೇಶನ ಮಾಡಿದ್ದರು. ‘ಕೋಯಿ ಮಿಲ್ ಗಯಾ’ ಸಿನಿಮಾದ ಕತೆಯನ್ನೇ ಮುಂದುವರೆಸಿ ‘ಕ್ರಿಶ್’ ಕತೆ ಹೆಣೆಯಲಾಗಿತ್ತು. ‘ಕ್ರಿಶ್ 3’ ಸಿನಿಮಾ, 2013 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು, ಇದೀಗ ‘ಕ್ರಿಶ್ 4’ ಸಿನಿಮಾದ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ.
‘ಕ್ರಿಶ್ 3’ ಸಿನಿಮಾ ಹಿಟ್ ಆದ ಬಳಿಕ 12 ವರ್ಷಗಳ ಬಳಿಕ ‘ಕ್ರಿಶ್ 4’ ಸಿನಿಮಾ ನಿರ್ಮಿಸುವ ಬಗ್ಗೆ ಆಸಕ್ತಿಯನ್ನು ರಾಕೇಶ್ ರೋಷನ್ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಳೆದ ಒಂದು ವರ್ಷದಿಂದಲೂ ಚರ್ಚೆ ಜಾರಿಯಲ್ಲಿದೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಸ್ವತಃ ರಾಕೇಶ್ ರೋಷನ್ ಹೇಳಿಕೊಂಡಿರುವಂತೆ, ಸಿನಿಮಾದ ಕತೆ ಬಹುತೇಕ ರೆಡಿಯಿದೆ. ಆದರೆ ನಿರ್ದೇಶಕರು ಅಂತಿಮವಾಗುವುದು ತುಸು ತಡವಾಗಿತ್ತು. ಇದೀಗ ಸಿನಿಮಾಕ್ಕೆ ನಿರ್ದೇಶಕರು ಸಿಕ್ಕಿದ್ದಾರೆ. ವಿಶೇಷವೆಂದರೆ ಇಂಥಹಾ ಜನಪ್ರಿಯ ಸಿನಿಮಾ ಸರಣಿಯ ಸಿನಿಮಾ ನಿರ್ದೇಶಿಸುತ್ತಿರುವುದು ಈ ವರೆಗೆ ಒಂದೂ ಸಿನಿಮಾ ನಿರ್ದೇಶನ ಮಾಡದ ಆದರೆ ಚಿತ್ರರಂಗಕ್ಕೆ ಹಳಬರಾಗಿರುವ ಒಬ್ಬ ಸೂಪರ್ ಸ್ಟಾರ್ ನಟ! ಅವರೇ ಹೃತಿಕ್ ರೋಷನ್.
ಹೌದು, ನಟ ಹೃತಿಕ್ ರೋಷನ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗುತ್ತಿದ್ದಾರೆ. ‘ಕ್ರಿಶ್’ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಕ್ರಿಶ್ 4’ ಸಿನಿಮಾದ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ. ಈ ಹಿಂದಿನ ಎಲ್ಲ ಕ್ರಿಶ್ ಸರಣಿಯ ಸಿನಿಮಾಗಳನ್ನು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಆದರೆ ಈಗ ಅವರಿಗೆ ವಯಸ್ಸಾಗಿದ್ದು, ತಾವು ಇನ್ನುಮುಂದೆ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಹಾಗಾಗಿ ಜವಾಬ್ದಾರಿಯನ್ನು ಸ್ವತಃ ಹೃತಿಕ್ ರೋಷನ್ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ:ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಬಾಲಿವುಡ್ ನಿರ್ಮಾಪಕರಿಗೆ ಬುದ್ಧಿ ಹೇಳಿದ ಸನ್ನಿ ಡಿಯೋಲ್
ಅಂದಹಾಗೆ ‘ಕ್ರಿಶ್ 4’ ಸಿನಿಮಾವನ್ನು ಹೃತಿಕ್ ರೋಷನ್ರ ಆಪ್ತ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಣವನ್ನೂ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾದ ಬಜೆಟ್ ಹೆಚ್ಚಾಯ್ತು ಎಂದು ಹೇಳಿ, ‘ಕ್ರಿಶ್ 4’ ಸಿನಿಮಾದಿಂದ ಅವರು ಹೊರನಡೆದಿದ್ದಾರೆ. ಇದೇ ಕಾರಣಕ್ಕೆ ಈಗ ಅನಿವಾರ್ಯವಾಗಿ ಸ್ವತಃ ಹೃತಿಕ್ ರೋಷನ್ ಅವರು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಹೃತಿಕ್ ರೋಷನ್ ಅವರು ತಮ್ಮ ಜೀವನದ ಬಹುಸಮಯವನ್ನು ಸಿನಿಮಾ ಸೆಟ್ಗಳಲ್ಲಿ ಕಳೆದಿದ್ದಾರೆ. ನಟ ಆಗುವ ಮುಂಚೆ ಸಹ ಅವರ ತಂದೆ ರಾಕೇಶ್ ರೋಷನ್ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಿಶ್ವ ಸಿನಿಮಾಗಳನ್ನು ನೋಡುವ, ವಿಶ್ಲೇಷಿಸುವ ಹೃತಿಕ್ ರೋಷನ್ ಒಳ್ಳೆಯ ನಿರ್ದೇಶಕರಾಗಬಹುದು ಎಂಬ ಭರವಸೆ ಅವರ ಅಭಿಮಾನಿಗಳದ್ದು. ಹೃತಿಕ್ ನಿರ್ದೇಶನ ಮಾಡಲಿರುವ ‘ಕ್ರಿಶ್ 4’ ಸಿನಿಮಾವನ್ನು ರಾಕೇಶ್ ರೋಷನ್ ಮತ್ತು ಆದಿತ್ಯ ಚೋಪ್ರಾ ಅವರುಗಳು ನಿರ್ಮಾಣ ಮಾಡಲಿದ್ದಾರೆ. ಇದೇ ವರ್ಷದ ಅಂತ್ಯದ ವೇಳೆಗೆ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ