ಭಾರತೀಯ ಚಿತ್ರರಂಗಕ್ಕೆ ಅನರ್ಘ್ಯ ರತ್ನ ಹುಡುಕಿ ಕೊಟ್ಟ ನಿರ್ಮಾಪಕಿ, ನಟಿ ನಿಧನ
Producer C Krishnaveni: ತೆಲುಗು ಚಿತ್ರರಂಗದ ಲೆಜೆಂಡರಿ ನಟ, ಮಾಜಿ ಸಿಎಂ ಎನ್ಟಿಆರ್ ಅವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ನಿರ್ಮಾಪಕಿ ಸಿ ಕೃಷ್ಣವೇಣಿ ಇಂದು ನಿಧನ ಹೊಂದಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು. ಎನ್ಟಿಆರ್ ಮಾತ್ರವೇ ಅಲ್ಲದೆ ಘಂಟಸಾಲ, ರಾಘವೇಂದ್ರ ರಾವ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಯ ಇವರದ್ದೇ.

ಭಾರತ ಚಿತ್ರರಂಗವನ್ನು ಕಟ್ಟಿದ ನಟರುಗಳ ಸಾಲಿನಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಒಂದು ಎನ್ಟಿಆರ್. ನಂದಮೂರಿ ತಾರಕ ರಾಮಾರಾವ್ ಅವರು ತೆಲುಗು ಚಿತ್ರರಂಗದ ಧೀಮಂತ ನಟ ಮಾತ್ರವೇ ಅಲ್ಲದೆ ರಾಜಕೀಯದಲ್ಲಿಯೂ ಛಾಪು ಮೂಡಿಸಿದವರು. ಸ್ವಂತ ರಾಜಕೀಯ ಪಕ್ಷ ಕಟ್ಟಿ ಅವಿಭಜಿತ ಆಂಧ್ರ ಪ್ರದೇಶದ ಸಿಎಂ ಆಗಿ ಜನಪಾಲನೆ ಮಾಡಿದವರು. ಇಂಥಹಾ ಅನರ್ಘ್ಯ ರತ್ನವನ್ನು ಹುಡುಕಿ ಸಿನಿಮಾ ಪ್ರೇಮಿಗಳಿಗೆ ಪರಿಚಯಿಸಿದ ನಿರ್ಮಾಪಕಿ ಇಂದು (ಫೆಬ್ರವರಿ 16) ನಿಧನರಾಗಿದ್ದಾರೆ.
ತೆಲುಗು ಚಿತ್ರರಂಗದ ಜನಪ್ರಿಯ ನಟಿ, ನಿರ್ಮಾಪಕಿ ಸಿ ಕೃಷ್ಣವೇಣಿ ತಮ್ಮ 102ನೇ ವಯಸ್ಸಿನಲ್ಲಿ ಇಂದು (ಫೆಬ್ರವರಿ 16) ನಿಧನ ಹೊಂದಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. 1938 ರಲ್ಲಿ ನಟನೆ ಆರಂಭಿಸಿದ ಕೃಷ್ಣವೇಣಿ ಮೊದಲು ನಟಿಸಿದ್ದು ‘ಕಚ ದೇವಯಾನಿ’ ಸಿನಿಮಾದಲ್ಲಿ. ನಟಿಯಾಗಿರುವ ಜೊತೆಗೆ ನಿರ್ಮಾಪಕಿಯೂ ಆಗಿದ್ದ ಸಿ ಕೃಷ್ಣವೇಣಿ, ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಎನ್ಟಿಆರ್ ಅವರ ಮೊದಲ ಸಿನಿಮಾ ‘ಮನ ದೇಸಂ’ ನ ನಿರ್ಮಾಪಕಿ ಆಗಿದ್ದ ಕೃಷ್ಣವೇಣಿ ಆ ಸಿನಿಮಾದಲ್ಲಿ ನಟಿಸಿದ್ದರು ಸಹ.
ಕೃಷ್ಣವೇಣಿಯ ಕುಟುಂಬದವರು ಸ್ಟುಡಿಯೋ ಸಹ ಹೊಂದಿದ್ದರು. ಹಾಗಾಗಿ ಕೆಲವು ಸಿನಿಮಾಗಳನ್ನು ಕೃಷ್ಣವೇಣಿ ನಿರ್ಮಾಣ ಮಾಡಿದ್ದರು. ಎನ್ಟಿಆರ್ ನಟನೆಯ ಮೊದಲ ಸಿನಿಮಾ ನಿರ್ಮಾಣ ಮಾಡಿದ ಜೊತೆಗೆ, ದಿಗ್ಗಜ ಗಾಯಕ ಘಂಟಸಾಲ ಅವರಿಗೂ ಮೊದಲ ಬಾರಿಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದು ಇದೇ ಕೃಷ್ಣವೇಣಿಯವರು. ತೆಲುಗು ಚಿತ್ರರಂಗದ ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರಿಗೆ ಮೊದಲ ಅವಕಾಶವನ್ನು ಕೊಟ್ಟಿದ್ದು ಇವರೇ. ನಿರ್ಮಾಪಕಿಯಾಗಿ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕೃಷ್ಣವೇಣಿ, 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಒಳ್ಳೆಯ ಹಾಡುಗಾರ್ತಿ ಸಹ ಆಗಿದ್ದರು.
ಇದನ್ನೂ ಓದಿ:ಸಿಸಿಎಲ್ಗೂ ಮೊದಲು ಪುನೀತ್ ಸಮಾಧಿಗೆ ಟಾಲಿವುಡ್ ಸೆಲೆಬ್ರಿಟಿಗಳ ಭೇಟಿ
ಕೃಷ್ಣವೇಣಿಯವರ ನಿಧನಕ್ಕೆ ತೆಲುಗು ಚಿತ್ರರಂಗ ಮಾತ್ರವೇ ಅಲ್ಲದೆ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ರಾಜಕಾರಣಿಗಳು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ, ಆಂಧ್ರ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಸಹ ಟ್ವೀಟ್ ಮಾಡಿದ್ದು, ‘ಕೃಷ್ಣವೇಣಿ ಅವರು ಕಾಲವಾದರೆಂಬ ಸುದ್ದಿ ತಿಳಿದು ಬೇಸರವಾಯ್ತು. ಕೃಷ್ಣವೇಣಿಯವರು ತೆಲುಗು ಚಿತ್ರರಂಗದ ಮೊದಲ ನಿರ್ಮಾಪಕಿ. ನಟಿ, ಗಾಯಕಿ, ನಿರ್ಮಾಪಕಿ, ಸ್ಟುಡಿಯೋ ಮುಖ್ಯಸ್ಥೆಯಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಶ್ರೀ ಎನ್ಟಿಆರ್, ಘಂಟಸಾಲ, ರಾಘವೇಂದ್ರ ರಾವ್ ಅಂಥಹಾ ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲಬೇಕು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ