ಸೌತ್ ಇಂಡಸ್ಟ್ರಿ (South Film Industry) ಹಾಗೂ ಬಾಲಿವುಡ್ ಎಂಬ ಚರ್ಚೆ ಜೋರಾಗಿದೆ. ಬಾಲಿವುಡ್ ಮಂದಿಗೆ ಈ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇವೆ. ಕೆಲವರು ಈ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದರೆ, ಇನ್ನೂ ಕೆಲವರು ಈ ಬಗ್ಗೆ ನೇರವಾಗಿ ಉತ್ತರ ನೀಡುತ್ತಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರ ನಟನೆಯ ‘ಪೃಥ್ವಿರಾಜ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ದಕ್ಷಿಣ ಸಿನಿಮಾ vs ಬಾಲಿವುಡ್ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ (Allu Arjun) ಜತೆ ಕೆಲಸ ಮಾಡಬೇಕು ಎನ್ನುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
‘ದೇಶದಲ್ಲಿ ಒಡೆದು ಆಳುವ ನೀತಿಯನ್ನು ದಯವಿಟ್ಟು ನಿಲ್ಲಿಸಿ. ದಕ್ಷಿಣ ಮತ್ತು ಉತ್ತರ ಇಂಡಸ್ಟ್ರಿ ಎಂಬುದು ಇಲ್ಲ. ನಾವೆಲ್ಲರೂ ಒಂದಾಗಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ. ನನ್ನ ಜತೆ ಅಲ್ಲು ಅರ್ಜುನ್ ಆದಷ್ಟು ಬೇಗ ಕೆಲಸ ಮಾಡಬೇಕು. ನಾನು ಮತ್ತೋರ್ವ ದಕ್ಷಿಣದ ಸ್ಟಾರ್ ನಟನೊಂದಿಗೆ ನಟಿಸುತ್ತಿದ್ದೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್. ಅವರ ನಟನೆಯ ‘ಪೃಥ್ವಿರಾಜ್’ ಸಿನಿಮಾ ಜೂನ್ 3ರಂದು ತೆರೆಗೆ ಬರುತ್ತಿದೆ.
‘ನಾನು ಈ ವಿಭಜನೆಯನ್ನು ನಂಬುವುದಿಲ್ಲ. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಹಾಗೂ ಉತ್ತರ ಭಾರತ ಇಂಡಸ್ಟ್ರಿ ಎಂದು ಯಾರಾದರೂ ಡಿವೈಡ್ ಮಾಡಿ ಮಾತನಾಡಿದರೆ ನನಗೆ ಸಿಟ್ಟೇ ಬರುತ್ತದೆ. ನಾವೆಲ್ಲರೂ ಒಂದು. ಈ ಪ್ರಶ್ನೆಯನ್ನು ಕೇಳುವುದನ್ನು ನಾವು ನಿಲ್ಲಿಸಬೇಕು. ಬ್ರಿಟಿಷರು ಬಂದು ನಮ್ಮನ್ನು ವಿಭಜಿಸಿದರು, ನಮ್ಮ ಮೇಲೆ ಆಕ್ರಮಣ ಮಾಡಿದರು ಮತ್ತು ನಮ್ಮನ್ನು ಆಳಿದರು. ನಾವು ಅದರಿಂದ ಪಾಠವನ್ನು ಕಲಿತಂತೆ ಕಾಣುತ್ತಿಲ್ಲ. ನಮಗೆ ಇನ್ನೂ ಅರ್ಥವಾಗುತ್ತಿಲ್ಲ. ನಾವೆಲ್ಲರೂ ಒಂದೇ ಎಂದು ಭಾವಿಸಿದ ದಿನ ಎಲ್ಲವೂ ಸರಿಯಾಗುತ್ತದೆ ಎಂಬುದು ನನ್ನ ಭಾವನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ
‘ಬಚ್ಚನ್ ಪಾಂಡೆ’ ರಿಮೇಕ್ ಸಿನಿಮಾ. ಈ ಬಗ್ಗೆ ಮಾತನಾಡಿರುವ ಅವರು, ‘ರಿಮೇಕ್ ಸಿನಿಮಾಗಳನ್ನು ಏಕೆ ಮಾಡುತ್ತಿದ್ದೇನೆ ಎಂದು ನನ್ನನ್ನು ಪ್ರಶ್ನಿಸಲಾಯಿತು. ನಾನೇಕೆ ರಿಮೇಕ್ ಮಾಡಬಾರದು? ಅದರಲ್ಲಿ ಇರುವ ಸಮಸ್ಯೆ ಏನು? ನನ್ನ ‘ರೌಡಿ ರಾಠೋರ್’ ರಿಮೇಕ್ ಸಿನಿಮಾ. ಅದರಿಂದ ಆದ ಸಮಸ್ಯೆ ಆದರೂ ಏನು? ದಕ್ಷಿಣ ಭಾರತದಲ್ಲಿ ಉತ್ತಮ ಸಿನಿಮಾಗಳಿದ್ದರೆ ನಾವು ಅದರ ಹಕ್ಕುಗಳನ್ನು ತೆಗೆದುಕೊಂಡು ಇಲ್ಲಿ ರೀಮೇಕ್ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಭೆಗಳು ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಖಂಡಿತವಾಗಿಯೂ ನಮ್ಮಲ್ಲಿ ಪ್ರತಿಭೆ ಇದೆ. ನಮಗೆ ಕಥೆ ಇಷ್ಟವಾದರೆ ಅದನ್ನು ಹಿಂದಿಗೆ ಏಕೆ ರಿಮೇಕ್ ಮಾಡಬಾರದು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.