‘ಶ್ರೀ ಅಲ್ಲಮ ಪ್ರಭು’ ಚಿತ್ರಕ್ಕೆ ಶುಭಕೋರಲು ಬಂದ ಪ್ರಮೋದ್ ಮುತಾಲಿಕ್; ಸಿನಿಮಾ ಬಗ್ಗೆ ಹೇಳಿದ್ದೇನು?
Pramod Muthalik: ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರಿಗೆ ಸಿನಿಮಾ ಕ್ಷೇತ್ರದ ಜೊತೆ ಯಾವುದೇ ನಂಟು ಇಲ್ಲ. ಹಾಗಿದ್ದರೂ ಕೂಡ ಅವರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ (Sri Allama Prabhu) ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಶುಭ ಕೋರಿದ್ದಾರೆ. ಈ ಚಿತ್ರಕ್ಕೆ ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ. ಮಹಾವೀರ ಪ್ರಭು ಮತ್ತು ಮಾಧವಾನಂದ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರು ಎಂದು ಯೋಚಿಸುತ್ತಿದೆ. ಈ ತಂಡದವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು’ ಎಂದಿದ್ದಾರೆ ಪ್ರಮೋದ್ ಮುತಾಲಿಕ್.
‘ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳು ಇರುವುದು ನಮ್ಮ ದೇಶಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಲ್ಲಿ ಒಬ್ಬರಾದ ಅಲ್ಲಮಪ್ರಭುಗಳ ಕುರಿತಾದ ಈ ಸಿನಿಮಾ ಯಶಸ್ವಿಯಾಗಲಿ’ ಎಂದು ಪ್ರಮೋದ್ ಮುತಾಲಿಕ್ ಹಾರೈಸಿದ್ದಾರೆ.
‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾಗೆ ನಟ ‘ನೆನಪಿರಲಿ’ ಪ್ರೇಮ್ ಕೂಡ ಶುಭ ಕೋರಿದ್ದಾರೆ. ‘ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಹೊಡೆದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಅಂದರೆ ಅದಕ್ಕೆ ಅಲ್ಲಮಪ್ರಭುಗಳಂತಹ ಸಾಧು-ಸಂತರ ಆಶೀರ್ವಾದವೇ ಕಾರಣ’ ಎಂಬುದು ಪ್ರೇಮ್ ಮಾತು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
ತೇರದಾಳ, ಬನವಾಸಿ ಹಾಗೂ ಬೆಂಗಳೂರಿನಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ನಿರ್ದೇಶಕ ಶರಣ್ ಗದ್ವಾಲ್ ಅವರಿಗೆ ಇದು ಮೊದಲ ಸಿನಿಮಾ. ‘ಹನ್ನೆರಡನೇ ಶತಮಾನದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಆ ಪ್ರಯತ್ನ ಮಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಭಾ.ಮ. ಹರೀಶ್ ಕೂಡ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್ ಹಾಸನ್; ಕನ್ನಡದ ಟ್ರೆಂಡ್ ಫಾಲೋ ಮಾಡ್ತಿದೆ ‘ವಿಕ್ರಮ್’ ಚಿತ್ರ
ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆರ್. ಗಿರಿ ಛಾಯಾಗ್ರಹಣ, ಕೆಂಪರಾಜು ಸಂಕಲನ ಮಾಡಿದ್ದಾರೆ. ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.