ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​
ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

ಅಣ್ಣಾಥೆ, ಸೂರ್ಯವಂಶಿ ಮತ್ತು ಎಟರ್ನಲ್ಸ್​ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿವೆ. ಆ ಮೂಲಕ ನಿರ್ಮಾಪಕರು ಓಟಿಟಿ ಬದಲು ಮತ್ತೆ ಚಿತ್ರಮಂದಿರಗಳ ಕಡೆಗೆ ಮನಸ್ಸು ಮಾಡುವಂತಾಗಿದೆ.

TV9kannada Web Team

| Edited By: Madan Kumar

Nov 11, 2021 | 2:44 PM

ಕೊರೊನಾ ಹಾವಳಿ ಶುರುವಾದ ಬಳಿಕ ಜಗತ್ತಿನಲ್ಲಿ ಅನೇಕ ಬದಲಾವಣೆಗಳಾದವು. ಪ್ರತಿ ದಿನ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದ ಉದ್ಯಮಗಳೆಲ್ಲ ನೆಲಕಚ್ಚಿದ್ದವು. ಚಿತ್ರಮಂದಿರಗಳ ಬ್ಯುಸಿನೆಸ್​ ಮೇಲೆ ಲಾಕ್​ಡೌನ್​ ತೀವ್ರ ಥರದಲ್ಲಿ ಕೆಟ್ಟ ಪರಿಣಾಮ ಬೀರಿತ್ತು. ಇನ್ನೇನು ಎಲ್ಲವೂ ಸರಿ ಆಯಿತು ಎನ್ನುವಾಗಲೇ ಎರಡನೇ ಲಾಕ್​ಡೌನ್​ ಎದುರಾಗಿತ್ತು. ಈಗ ಕೊರೊನಾ ಕಾಟ ನಿಧಾನಕ್ಕೆ ಕಡಿಮೆ ಆಗಿದೆ. 100 ಕೋಟಿಗೂ ಅಧಿಕ ಲಸಿಕೆ ನೀಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಚಿತ್ರಮಂದಿರಗಳ ವಹಿವಾಟು ಗಣನೀಯವಾಗಿ ಚೇತರಿಕೆ ಕಂಡಿದೆ. ಅದರಲ್ಲೂ ರಜನಿಕಾಂತ್​ ನಟನೆಯ ‘ಅಣ್ಣಾಥೆ’ (Annaatthe), ಅಕ್ಷಯ್​ ಕುಮಾರ್​ ಅಭಿನಯದ ‘ಸೂರ್ಯವಂಶಿ’ (Sooryavanshi) ಹಾಗೂ ಹಾಲಿವುಡ್​ನ ಎಟರ್ನಲ್ಸ್​ (Eternals) ಸಿನಿಮಾಗಳು ನಿಜಕ್ಕೂ ಮೋಡಿ ಮಾಡಿವೆ. ನೂರಾರು ಕೋಟಿ ರೂಪಾಯಿ ಗಳಿಸುವ ಮೂಲಕ ಚಿತ್ರಮಂದಿರಗಳಲ್ಲಿ ಮತ್ತೆ ಹಳೇ ಚಾರ್ಮ್​ ಮರಳುವಂತಾಗಿದೆ.

‘ಅಣ್ಣಾಥೆ’ ಬೊಕ್ಕಸಕ್ಕೆ 200 ಕೋಟಿ ರೂ.!

ಈ ವರ್ಷದ ದೀಪಾವಳಿಯಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ತೆರೆಕಂಡವು. ನ.4ರಂದು ರಜನಿಕಾಂತ್​ ಅಭಿನಯದ ‘ಅಣ್ಣಾಥೆ’ ಚಿತ್ರ ತೆರೆಕಂಡು ಧೂಳೆಬ್ಬಿಸಿತು. ಒಂದು ವಾರದಲ್ಲಿ ಈ ಸಿನಿಮಾ ವಿಶ್ವಾದ್ಯಂತ 200 ಕೋಟಿ ರೂ. ಗಳಿಸಿದೆ. ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್​ ಜೊತೆ ಕೀರ್ತಿ ಸುರೇಶ್​, ನಯನತಾರಾ, ಜಗಪತಿ ಬಾಬು, ಪ್ರಕಾಶ್​ ರಾಜ್​ ಮುಂತಾದ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಗಲ್ಲಾಪೆಟ್ಟಿಗೆ ಗಳಿಕೆ ಸ್ವಲ್ಪ ಕುಸಿದಿದೆ.

‘ಸೂರ್ಯವಂಶಿ’ ಮೂಲಕ ಗೆದ್ದು ಬೀಗಿದ ಅಕ್ಷಯ್​ ಕುಮಾರ್​!

ನಟ ಅಕ್ಷಯ್​ ಕುಮಾರ್​ ಅವರಿಗೆ ‘ಸೂರ್ಯವಂಶಿ’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ. ಕಳೆದ 18 ತಿಂಗಳಿನಿಂದ ಬಾಲಿವುಡ್​ನಲ್ಲಿ ಯಾವುದೇ ಸಿನಿಮಾ ಈ ಮಟ್ಟಿಗಿನ ಯಶಸ್ಸು ಕಂಡಿರಲಿಲ್ಲ. ಕೇವಲ 5 ದಿನದಲ್ಲಿ ‘ಸೂರ್ಯವಂಶಿ’ ಸಿನಿಮಾ 100 ಕೋಟಿ ರೂ. ಬಾಚಿಕೊಂಡಿದೆ. ರೋಹಿತ್​ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ. ಅಜಯ್​ ದೇವಗನ್​, ರಣವೀರ್​ ಸಿಂಗ್​ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳನ್ನು ಹೊಂದಿರುವ ಈ ಚಿತ್ರಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.​

ಹಾಲಿವುಡ್​ನ ‘ಎಟರ್ನಲ್ಸ್​’ ಸಿನಿಮಾ ಕೂಡ ಸದ್ದಿಲ್ಲದೇ ಉತ್ತಮ ಕಮಾಯಿ ಮಾಡಿದೆ. ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಅನೇಕ ಕಡೆಗಳಲ್ಲಿ ಇನ್ನೂ ಶೇ.50ರಷ್ಟು ಆಸನಭರ್ತಿಗೆ ಮಾತ್ರ ಅವಕಾಶ ಇದೆ. ಹಾಗಿದ್ದರೂ ಕೂಡ ಈ ಎಲ್ಲ ಸಿನಿಮಾಗಳು ಉತ್ತಮ ಕಲೆಕ್ಷನ್​ ಮಾಡಿರುವುದರಿಂದ ಥಿಯೇಟರ್​ ಬ್ಯುಸಿನೆಸ್​ ಚೇತರಿಕೆ ಕಂಡಿದೆ. ಹಲವು ಸಿನಿಮಾಗಳು ಓಟಿಟಿ ಮೊರೆ ಹೋಗುತ್ತಿರುವ ಈ ಸಂದರ್ಭದಲ್ಲಿ ಅಣ್ಣಾಥೆ, ಸೂರ್ಯವಂಶಿ ಮತ್ತು ಎಟರ್ನಲ್ಸ್​ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದ್ದು, ನಿರ್ಮಾಪಕರು ಮತ್ತೆ ಚಿತ್ರಮಂದಿರಗಳ ಕಡೆಗೆ ಮನಸ್ಸು ಮಾಡುವಂತಾಗಿದೆ.

ಇದನ್ನೂ ಓದಿ:

Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್​ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್​

Sooryavanshi: ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ‘ಸೂರ್ಯವಂಶಿ’; ದಿನದ 24 ಗಂಟೆಯೂ ಅಕ್ಷಯ್​ ಕುಮಾರ್​ ಚಿತ್ರ ಪ್ರದರ್ಶನ

Follow us on

Related Stories

Most Read Stories

Click on your DTH Provider to Add TV9 Kannada