Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್
Annaatthe: ಕೀರ್ತಿ ಸುರೇಶ್ ಅವರ ಪ್ರತಿಭೆ ಬಗ್ಗೆ ಅನುಮಾನವೇ ಬೇಡ. ರಜನಿಕಾಂತ್ ನಾಯಕತ್ವದ ‘ಅಣ್ಣಾಥೆ’ ಸಿನಿಮಾ ನ.4ರಂದು ಬಿಡುಗಡೆ ಆಗಿದ್ದು, ಅದರಲ್ಲಿ ಕೀರ್ತಿ ಸುರೇಶ್ ಅವರ ನಟನೆಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.
ನಟಿ ಕೀರ್ತಿ ಸುರೇಶ್ (Keerthy Suresh) ಅವರ ಖ್ಯಾತಿ ದಿನೇದಿನೆ ಹೆಚ್ಚುತ್ತಿದೆ. ‘ಮಹಾನಟಿ’ ಸಿನಿಮಾ ಮೂಲಕ 2019ರಲ್ಲಿ ಅವರಿಗೆ ಬಿಗ್ ಹಿಟ್ ಸಿಕ್ಕಿತ್ತು. ಆ ನಂತರ ಅವರ ಬೇಡಿಕೆ ದುಪ್ಪಟ್ಟಾಯಿತು. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕಿ ಆಗುತ್ತಿರುವ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಜೊತೆ ಒಮ್ಮೆಯಾದರೂ ಅಭಿನಯಿಸಬೇಕು ಎಂಬುದು ಎಲ್ಲ ಹೀರೋಯಿನ್ಗಳ ಆಸೆ. ಅಂಥ ಆಸೆ ಈಡೇರುವುದರ ಜೊತೆಗೆ ಭಾರಿ ಸಂಭಾವನೆ ಕೂಡ ಸಿಕ್ಕರೆ ಲಾಟರಿ ಹೊಡೆದಂತೆಯೇ ಸರಿ. ನಟಿ ಕೀರ್ತಿ ಸುರೇಶ್ ಅವರಿಗೆ ‘ಅಣ್ಣಾಥೆ’ (Annaatthe) ಸಿನಿಮಾದಲ್ಲಿ ಆ ರೀತಿಯ ಲಾಟರಿ ಹೊಡೆದಿದೆ ಎಂದರೂ ತಪ್ಪಿಲ್ಲ. ಈ ಸಿನಿಮಾದಲ್ಲಿ ಅವರು ರಜನಿಕಾಂತ್ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಅದಕ್ಕಾಗಿ ನಿರ್ಮಾಪಕರು ಕೀರ್ತಿ ಸುರೇಶ್ ಅವರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ (Keerthy Suresh Remuneration) ನೀಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಕೀರ್ತಿ ಸುರೇಶ್ ಅವರ ಪ್ರತಿಭೆ ಬಗ್ಗೆ ಅನುಮಾನವೇ ಬೇಡ. ಎಂಥ ಪಾತ್ರ ಕೊಟ್ಟರೂ ಮನೋಜ್ಞನಾಗಿ ಅವರು ಅಭಿನಯಿಸುತ್ತಾರೆ. ‘ಅಣ್ಣಾಥೆ’ ಸಿನಿಮಾ ನ.4ರಂದು ಬಿಡುಗಡೆ ಆಗಿದ್ದು, ಅದರಲ್ಲಿ ಕೀರ್ತಿ ಸುರೇಶ್ ಅವರ ನಟನೆಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಇಂಥ ಕಲಾವಿದೆಗೆ ನಿರ್ಮಾಪಕರು 2 ಕೋಟಿ ರೂ. ಸಂಭಾವನೆ ಕೊಟ್ಟರೆ ನಷ್ಟವೇನಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕೀರ್ತಿ ಸುರೇಶ್ ಅವರು ತಮ್ಮ ಈವರೆಗಿನ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿರುವುದು ಇದೇ ಮೊದಲ ಎನ್ನಲಾಗುತ್ತಿದೆ.
ಗಲ್ಲಾಪೆಟ್ಟಿಗೆಯಲ್ಲಿ ‘ಅಣ್ಣಾಥೆ’ ಭರ್ಜರಿ ಕಮಾಯಿ:
ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡಿರುವ ‘ಅಣ್ಣಾಥೆ’ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಆ ಮೂಲಕ ರಜನಿಕಾಂತ್ ಅವರ ಖಾತೆಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸೇರ್ಪಡೆ ಆಗಿದೆ. ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡಿತು. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಿದೆ.
ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್ 6ರಂದು ಚಿತ್ರ 33.71 ಕೋಟಿ ಗಳಿಸಿತು. ಭಾನುವಾರ (ನ.7) ಸಿನಿಮಾ ಗಳಿಕೆ 28.20 ಕೋಟಿ ಹಾಗೂ ಸೋಮವಾರ 11.85 ಕೋಟಿ ಬಾಚಿಕೊಂಡಿತು. ಈ ಮೂಲಕ ಸಿನಿಮಾ ಕಲೆಕ್ಷನ್ 186.58 ಕೋಟಿ ರೂಪಾಯಿ ಆಗಿತ್ತು. ಬಾಕ್ಸ್ಆಫೀಸ್ನಲ್ಲಿ ಚಿತ್ರದ ನಾಗಾಲೋಟ ಮುಂದುವರಿದಿದೆ.