ಮತ್ತೆ ಕೊನೆ ಕ್ಷಣದಲ್ಲಿ ‘ಅಖಂಡ 2’ಗೆ ಶಾಕ್ ಕೊಟ್ಟ ಹೈಕೋರ್ಟ್
Akhanda 2 movie: ನಂದಮೂರಿ ಬಾಲಕೃಷ್ಣ ನಟಿಸಿರುವ ‘ಅಖಂಡ 2’ ಸಿನಿಮಾ ಕಳೆದ ವಾರವೇ ಬಿಡುಗಡೆ ಆಗಬೇಕಿತ್ತು ಆದರೆ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿತ್ತು. ಸಮಸ್ಯೆಗಳನ್ನು ಬಗೆಹರಿಸಿಕೊಂಡು ಈ ವಾರ ಡಿಸೆಂಬರ್ 12ಕ್ಕೆ ಬಿಡುಗಡೆಗೆ ಸಜ್ಜಾಗಲಾಗಿತ್ತು, ಈಗ ಮತ್ತೊಮ್ಮೆ ನ್ಯಾಯಾಲವು ‘ಅಖಂಡ 2’ ಸಿನಿಮಾಕ್ಕೆ ಕೊನೆ ಕ್ಷಣದಲ್ಲಿ ಹೊಸ ಶಾಕ್ ನೀಡಿದೆ. ಏನದು?

ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ಕಳೆದ ಶುಕ್ರವಾರ ಅಂದರೆ ಡಿಸೆಂಬರ್ 05 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಇದ್ದ ಹಳೆಯ ಕೇಸಿನ ಕಾರಣದಿಂದಾಗಿ ಮದ್ರಾಸ್ ಹೈಕೋರ್ಟ್, ‘ಅಖಂಡ 2’ ಸಿನಿಮಾದ ಬಿಡುಗಡೆಗೆ ತಡೆ ನೀಡಿತ್ತು. ಆ ಬಳಿಕ ಸಿನಿಮಾದ ನಿರ್ಮಾಣ ಸಂಸ್ಥೆಯಾದ 14 ರೀಲ್ಸ್ ಪ್ಲಸ್ ಸಂಸ್ಥೆ ವಿವಾದ ಬಗೆಹರಿಸಿಕೊಂಡು ಇದೀಗ ನಾಳೆ ಅಂದರೆ ಡಿಸೆಂಬರ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಈಗ ಮತ್ತೊಮ್ಮೆ ನ್ಯಾಯಾಲಯ ಕೊನೆಯ ಕ್ಷಣದಲ್ಲಿ ಶಾಕ್ ನೀಡಿದೆ.
‘ಅಖಂಡ 2’ ಸಿನಿಮಾಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಮತ್ತು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲು ಸರ್ಕಾರ ಅನುಮತಿ ನೀಡಿವೆ. ತೆಲಂಗಾಣ ಸರ್ಕಾರ, ನಿನ್ನೆಯಷ್ಟೆ ‘ಅಖಂಡ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ ಕುರಿತಾಗಿ ನಿನ್ನೆಯಷ್ಟೆ ಹೊಸ ಆದೇಶ (ಜಿಓ) ಹೊರಡಿಸಿದ್ದು, 12 ರಿಂದ 14 ರವರೆಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 50 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ 100 ರೂಪಾಯಿ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಜೊತೆಗೆ ಪ್ರೀಮಿಯರ್ ಶೋಗಳಿಗೆ ಜಿಎಸ್ಟಿ ಸಹಿತ 600 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಿದೆ.
ಆದರೆ ಇದೀಗ ತೆಲಂಗಾಣ ಹೈಕೋರ್ಟ್, ತೆಲಂಗಾಣ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ವಕೀಲ ಶ್ರೀನಿವಾಸ್ ರೆಡ್ಡಿ ಎಂಬುವರು ಈ ಹಿಂದೆ ಸರ್ಕಾರವು ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ನೀಡುತ್ತಿರುವ ಅನುಮತಿಗಳ ಕುರಿತಾಗಿ ಆಕ್ಷೇಪಣೆ ಎತ್ತಿದ್ದರು. ಸೆಪ್ಟೆಂಬರ್ ತಿಂಗಳಲ್ಲಿಯೇ ಈ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿರುವ ನ್ಯಾಯಾಲಯವು ಪ್ರೀಮಿಯರ್ ಶೋಗಳಿಗೆ ಟಿಕೆಟ್ ದರ ಹೆಚ್ಚಿಸುವ ಆದೇಶಕ್ಕೆ ತಡೆ ನೀಡಿದೆ. ‘ಅಖಂಡ 2’ಗೆ ಮಾತ್ರವಲ್ಲದೆ ಈ ಆದೇಶ ಇತರೆ ಸಿನಿಮಾಗಳಿಗೂ ಅನ್ವಯಿಸಲಿದೆ. ಈ ಪ್ರಕರಣ ಕುರಿತ ವಿಚಾರಣೆ ನಾಳೆ (ಡಿಸೆಂಬರ್ 12) ಸಹ ನಡೆಯಲಿದೆ.
ಇದನ್ನೂ ಓದಿ:ಸಿಕ್ತು ನ್ಯಾಯಾಲಯದ ಅನುಮತಿ, ‘ಅಖಂಡ 2’ ಹೊಸ ಬಿಡುಗಡೆ ದಿನಾಂಕ ಘೋಷಣೆ
‘ಅಖಂಡ 2’ ಸಿನಿಮಾದ ಪ್ರೀಮಿಯರ್ ಶೋಗಳು ಇಂದು (ಡಿಸೆಂಬರ್ 11) ರಾತ್ರಿಯಿಂದಲೇ ಪ್ರಾರಂಭ ಆಗಲಿವೆ. ಬೆಂಗಳೂರು ಸೇರಿದಂತೆ ಆಂಧ್ರ, ತೆಲಂಗಾಣದ ಹಲವು ಪ್ರಮುಖ ನಗರಗಳಲ್ಲಿ ಇಂದು ರಾತ್ರಿಯಿಂದಲೇ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ಟಿಕೆಟ್ಗಳು ಸಹ ಮಾರಾಟ ಆಗಿವೆ. ಆದರೆ ಇದೀಗ ತೆಲಂಗಾಣ ಹೈಕೋರ್ಟ್ ನೀಡಿರುವ ಆದೇಶದಿಂದಾಗಿ ತೆಲಂಗಾಣದಾದ್ಯಂತ ಪ್ರೀಮಿಯರ್ ಶೋಗಳು ರದ್ದಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಮೊದಲ ವೀಕೆಂಡ್ನಲ್ಲಿ ಟಿಕೆಟ್ ದರ ಹೆಚ್ಚಳವೂ ರದ್ದಾಗಲಿದೆ.
‘ಅಖಂಡ 2’ ಸಿನಿಮಾವು 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾದ ಸೀಕ್ವೆಲ್ ಆಗಿದೆ. ಮೊದಲ ಸಿನಿಮಾನಲ್ಲಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದರು. ಬಾಲಯ್ಯ ನಾಗಸಾಧುವಾಗಿ ನಟಿಸಿದ್ದ ಪಾತ್ರ ಭಾರಿ ಹಿಟ್ ಆಗಿತ್ತು. ಇದೀಗ ಅದೇ ಪಾತ್ರವನ್ನೇ ಹೈಲೆಟ್ ಆಗಿ ಇರಿಸಿಕೊಂಡು ‘ಅಖಂಡ 2’ ಮಾಡಲಾಗಿದೆ. ‘ಅಖಂಡ’ ನಿರ್ದೇಶಿಸಿದ್ದ ಬೊಯಪಾಟಿ ಶ್ರೀನು ಅವರೇ ಈಗ ‘ಅಖಂಡ 2’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




