ಅನುಷ್ಕಾ ಶೆಟ್ಟಿ ನಗುವಿನಿಂದ ಚಿತ್ರೀಕರಣವೇ ನಿಂತಿತ್ತು ಹಲವು ಬಾರಿ
ತೆಲುಗು ಚಿತ್ರರಂಗವನ್ನು ಸುಮಾರು ಎರಡು ದಶಕಗಳ ಕಾಲ ಆಳಿದ ನಟಿ ಅನುಷ್ಕಾ ಶೆಟ್ಟಿ. ನಟಿ ಅನುಷ್ಕಾ ಸಿನಿಮಾಗಳಲ್ಲಿ ನಟಿಸುವಾಗ ಎಷ್ಟೋ ಬಾರಿ ಅವರಿಂದಾಗಿ ಚಿತ್ರೀಕರಣ ನಿಲ್ಲಿಸಲಾಗಿತ್ತಂತೆ. ಅಶಿಸ್ತಿನ ಕಾರಣಕ್ಕಲ್ಲ ಬದಲಿಗೆ ಅವರ ನಗುವಿನ ಕಾರಣಕ್ಕೆ.
ದಕ್ಷಿಣ ಭಾರತ ಚಿತ್ರರಂಗದ ವಿಶೇಷವಾಗಿ ತೆಲುಗು ಚಿತ್ರರಂಗದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty). ದಶಕಗಳ ಕಾಲ ಟಾಪ್ ನಟಿಯಾಗಿ ಟಾಲಿವುಡ್ ಅನ್ನು ಆಳಿದ್ದಾರೆ ಅನುಷ್ಕಾ ಶೆಟ್ಟಿ. ಆದರೆ ‘ಬಾಹುಬಲಿ’ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿದ್ದ ಅನುಷ್ಕಾ, ಇತ್ತೀಚೆಗಂತೂ ಎರಡು ವರ್ಷಕ್ಕೊಂದು ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ನಟನೆಯಿಂದ ಬಹುತೇಕ ದೂರವೇ ಉಳಿಯುವ ನಿರ್ಧಾರವನ್ನು ಅನುಷ್ಕಾ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಒಂದು ಸಮಯದಲ್ಲಿ ಅತ್ಯಂತ ಬ್ಯುಸಿಯಾಗಿದ್ದ ಅನುಷ್ಕಾ ರಿಂದ ಹಲವು ಬಾರಿ ಚಿತ್ರೀಕರಣ ನಿಂತಿತ್ತಂತೆ, ಆದರೆ ಅನುಷ್ಕಾರ ಅಶಿಸ್ತಿನಿಂದಲ್ಲ ಬದಲಿಗೆ ಅವರ ನಗುವಿನಿಂದ.
ಅನುಷ್ಕಾ ಶೆಟ್ಟಿಯೇ ಹಿಂದೊಮ್ಮೆ ಹೇಳಿಕೊಂಡಿದ್ದಂತೆ ಅವರಿಗೆ ನಗುವಿನ ಸಮಸ್ಯೆ ಇದೆಯಂತೆ! ಅನುಷ್ಕಾ ಶೆಟ್ಟಿಗೆ ಬಹಳ ಬೇಗ ಹಾಗೂ ತೀರ ಸಣ್ಣ-ಪುಟ್ಟ ತಮಾಷೆಯ ವಿಷಯಗಳಿಗೂ ಬಹಳ ನಗು ಬರುತ್ತದೆಯಂತೆ. ಒಮ್ಮೆ ನಗಲು ಆರಂಭಿಸಿದರೆ ಅವರಿಗೆ ನಿಲ್ಲಿಸಲು ಸಾಧ್ಯವಾಗುವುದಿಲ್ಲವಂತೆ. ಅನುಷ್ಕಾ ಶೆಟ್ಟಿ ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ನಗು ನಿಲ್ಲಿಸಲು ಆಗುವುದಿಲ್ಲವಂತೆ, ಒಮ್ಮೊಮ್ಮೆ ನೆಲದ ಮೆಲೆ ಬಿದ್ದು ಸಹ ನಗುವುದಿದೆಯಂತೆ. ಇದೇ ಕಾರಣಕ್ಕೆ ಹಲವು ಬಾರಿ ಚಿತ್ರೀಕರಣಗಳೂ ನಿಂತಿದ್ದಿದೆ.
ಇದನ್ನೂ ಓದಿ:ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಅನುಷ್ಕಾ ಶೆಟ್ಟಿ, ಪಕ್ಷ, ಕ್ಷೇತ್ರ ಯಾವುದು?
ಯಾವುದಾದರೂ ಕಾಮಿಡಿ ಸೀನ್ ಚಿತ್ರೀಕರಣ ಮಾಡಬೇಕಾದರೆ, ಅಥವಾ ಸೆಟ್ನಲ್ಲಿ ಯಾರಾದರೂ ಜೋಕ್ ಮಾಡಿದರೆ ಅನುಷ್ಕಾಗೆ ಪಳ್ಳನೆ ನಗು ಬಂದುಬಿಡುತ್ತಿತ್ತಂತೆ. 15-20 ನಿಮಿಷಗಳ ಕಾಲ ಅವರಿಗೆ ನಗು ನಿಯಂತ್ರಣಕ್ಕೆ ಬರುತ್ತಿರಲಿಲ್ಲವಂತೆ. ಅನುಷ್ಕಾರ ಈ ಸಮಸ್ಯೆಯನ್ನು ಚಿತ್ರತಂಡದವರು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದು ಸಹ ಇದೆಯಂತೆ. ಅವರಿಗೆ ಬ್ರೇಕ್ ಬೇಕಾದಾಗ ಅನುಷ್ಕಾರನ್ನು ನಗಿಸಿಬಿಡುತ್ತಿದ್ದರಂತೆ. ಅನುಷ್ಕಾ ನಕ್ಕು ಮುಗಿಸುವ ವೇಳೆಗೆ ಎಲ್ಲರೂ ಟೀ ಬ್ರೇಕ್ ತೆಗೆದುಕೊಂಡು ಮರಳಿ, ಅನುಷ್ಕಾಗೆ ಧನ್ಯವಾದ ಸಹ ಹೇಳುತ್ತಿದ್ದರಂತೆ.
ಅನುಷ್ಕಾ ಶೆಟ್ಟಿ ನಟಿಸಿದ್ದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ 2023 ಕ್ಕೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಇದೀಗ ಅನುಷ್ಕಾ ಶೆಟ್ಟಿ ಮಲಯಾಳಂನ ಹಾರರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನ ‘ಘಾಟಿ’ ಹೆಸರಿನ ಸಿನಿಮಾದಲ್ಲಿಯೂ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಇನ್ನು ಮಲಯಾಳಂನ ‘ಕಥನಾರ್’ ಸಿನಿಮಾ ಸಹ ಇದೇ ವರ್ಷದಲ್ಲಿ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ