ಕನ್ನಡಿಗನ ಕತೆಯಲ್ಲಿ ಅಕ್ಷಯ್ ಕುಮಾರ್, ‘ಸರ್ಫಿರಾ’ ಟ್ರೈಲರ್ ಬಿಡುಗಡೆ
ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ತಮಿಳು ಸಿನಿಮಾ ‘ಸೂರರೈ ಪೊಟ್ರು’ನ ಹಿಂದಿ ರೀಮೇಕ್ನಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾ ಜುಲೈ 12 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸೂರ್ಯ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ಗೆ (Bollywood) ಬಯೋಪಿಕ್ಗಳ ಮೇಲೆ ವಿಶೇಷ ಪ್ರೀತಿ, ಕ್ರೀಡಾ ಲೋಕದ ತಾರೆಯರು, ಬ್ಯುಸಿನೆಸ್ ಮ್ಯಾನ್, ಅಪರಾಧಿಗಳು, ರಾಜಕಾರಣಿಗಳು ಹೀಗೆ ಹಲವು ಜನಪ್ರಿಯ ವ್ಯಕ್ತಿಗಳ ಜೀವನದ ಬಗ್ಗೆ ಈಗಾಗಲೇ ಸಿನಿಮಾಗಳು ಬಂದಿವೆ. ಇದೀಗ ಕನ್ನಡಿಗನೊಬ್ಬನ ಕತೆಯನ್ನು ತೆರೆಗೆ ತರುತ್ತಿದೆ ಬಾಲಿವುಡ್ ಸಿನಿಮಾದಲ್ಲಿ ನಾಯಕನಾಗಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ನಟಿಸಿದ್ದು ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಅಂದಹಾಗೆ ಈ ಸಿನಿಮಾ ತಮಿಳು ಸಿನಿಮಾದ ರೀಮೇಕ್.
ಕಡಿಮೆ ವೆಚ್ಚದ ಏರ್ಲೈನ್ ಆರಂಭಿಸಿದ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಕುರಿತಾದ ‘ಸರ್ಫಿರಾ’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಈ ಹಿಂದೆ ತಮಿಳಿನಲ್ಲಿ ನಿರ್ಮಿಸಲಾಗಿದ್ದ ‘ಸೂರರೈ ಪೊಟ್ರು’ ಸಿನಿಮಾವನ್ನು ‘ಸರ್ಫಿರಾ’ ಹೆಸರಲ್ಲಿ ಹಿಂದಿಯಲ್ಲಿ ನಿರ್ಮಿಸಲಾಗಿದೆ. ತಮಿಳಿನಲ್ಲಿ ‘ಸೂರರೈ ಪೊಟ್ರು’ ಸಿನಿಮಾವನ್ನು ನಿರ್ದೇಶಿಸಿದ್ದ ಸುಧಾ ಕೊಂಗರಾ ಅವರೇ ಹಿಂದಿಯಲ್ಲಿಯೂ ನಿರ್ದೇಶನ ಮಾಡಿದ್ದಾರೆ. ತಮಿಳಿನಲ್ಲಿ ‘ಸೂರರೈ ಪೊಟ್ರು’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತಾದರೂ ಭಾರಿ ಜನಪ್ರಿಯತೆ ಗಳಿಸಿತ್ತು. ಇದೀಗ ‘ಸರ್ಫಿರಾ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕಮಲ್ ಹಾಸನ್ ಎದುರು ತೊಡೆತಟ್ಟಿದ ಅಕ್ಷಯ್ ಕುಮಾರ್; ನಡೆಯಲಿದೆ ದೊಡ್ಡ ಕ್ಲ್ಯಾಶ್
ತಮಿಳಿನಲ್ಲಿ ಸಿನಿಮಾ ಹೇಗಿತ್ತೊ, ಹಿಂದಿಯಲ್ಲಿಯೂ ಯಥಾವತ್ತು ರೀಮೇಕ್ ಮಾಡಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಹೇರ್ಸ್ಟೈಲ್ನಲ್ಲೂ ಸಹ ಬದಲಾವಣೆ ಮಾಡಲಾಗಿಲ್ಲ. ತಮಿಳಿನಲ್ಲಿ ಸೂರ್ಯ, ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟಿಸಿದ್ದರು. ಆದರೆ ಹಿಂದಿಯಲ್ಲಿ ಸೂರ್ಯ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ನಲ್ಲಿಯೂ ಸೂರ್ಯ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಪರೇಶ್ ರಾವಲ್ ಅವರೇ ಹಿಂದಿಯಲ್ಲಿ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಇತರೆ ಪಾತ್ರಗಳ ನಟರನ್ನು ಬದಲು ಮಾಡಲಾಗಿದೆ.
ಹಿಂದಿ ಸಿನಿಮಾಕ್ಕೆ ತಮಿಳು ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಬಂಡವಾಳ ಹೂಡಿದ್ದಾರೆ. ಜೊತೆಗೆ ವಿಕ್ರಂ ಭಾಟಿಯಾ ಮತ್ತು ವಿಕ್ರಂ ಮಲ್ಹೋತ್ರಾ ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ರಾಧಿಕಾ ನಾಯಕಿಯಾಗಿದ್ದಾರೆ. ‘ಸೂರರೈ ಪೊಟ್ರು’ ಸಿನಿಮಾದ ನಟನೆಗೆ ಸೂರ್ಯಾಗೆ ರಾಷ್ಟ್ರಪ್ರಶಸ್ತಿ ದೊರಕಿತ್ತು, ನಾಯಕಿ ಪಾತ್ರದಲ್ಲಿ ನಟಿಸಿದ್ದ ಅಪರಣ ಬಾಲಮುರಳಿ ನಟನೆಗೂ ಸಹ ರಾಷ್ಟ್ರಪತಿ ದೊರಕಿತ್ತು, ಅಲ್ಲದೆ ಇನ್ನೂ ಮೂರು ರಾಷ್ಟ್ರಪ್ರಶಸ್ತಿಗಳು ಈ ಸಿನಿಮಾಕ್ಕೆ ದೊರಕಿದ್ದವು. ಈಗ ‘ಸರ್ಫಿರಾ’ ಸಿನಿಮಾಕ್ಕೂ ಅದೇ ರೀತಿಯ ಪ್ರಶಂಸೆ ದೊರಕುತ್ತದೆಯೋ ನೋಡಬೇಕಿದೆ. ಜುಲೈ 12 ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ