‘ಹಮಾರೆ ಬಾರಾಹ್​’ ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ; ಕೆಲವು ದೃಶ್ಯ ಡಿಲೀಟ್

ಕೆಲವು ಆಕ್ಷೇಪಾರ್ಹ ದೃಶ್ಯಗಳ ಕಾರಣಕ್ಕೆ ‘ಹಮಾರೆ ಬಾರಾಹ್​’ ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿತ್ತು. ಆದರೆ ಈಗ ಅಂಥ ದೃಶ್ಯಗಳನ್ನು ಡಿಲೀಟ್​ ಮಾಡಲಾಗಿದೆ. ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ಈಗ ಬಾಂಬೆ ಹೈಕೋರ್ಟ್​ ಅನುಮತಿ ನೀಡಿ ಆದೇಶಿಸಿದೆ. ಈ ಚಿತ್ರದಲ್ಲಿ ಮುಸ್ಲಿಂ ಧರ್ಮದವರ ಭಾವನೆಗೆ ಧಕ್ಕೆ ಆಗುವಂತಹ ಅಂಶಗಳು ಇಲ್ಲ ಎಂದು ಕೋರ್ಟ್​ ಹೇಳಿದೆ.

‘ಹಮಾರೆ ಬಾರಾಹ್​’ ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ; ಕೆಲವು ದೃಶ್ಯ ಡಿಲೀಟ್
‘ಹಮಾರೆ ಬಾರಾಹ್​’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jun 19, 2024 | 10:05 PM

ವಿವಾದಕ್ಕೆ ಕಾರಣ ಆಗಿರುವ ‘ಹಮಾರೆ ಬಾರಾಹ್​’ (Hamare Baarah) ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು. ಆದರೆ ಈಗ ಈ ಸಿನಿಮಾದ ನಿರ್ಮಾಪಕರ ಪರವಾಗಿ ಕೋರ್ಟ್​ ತೀರ್ಪು ನೀಡಿದೆ. ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ನಿರ್ಮಾಪಕರು ಒಪ್ಪಿದ್ದಾರೆ. ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ಬಾಂಬೆ ಹೈಕೋರ್ಟ್​ (Bombay High Court) ಅನುಮತಿ ನೀಡಿದೆ. ಆರಂಭದಲ್ಲಿ ಈ ಸಿನಿಮಾದ ಶೀರ್ಷಿಕೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಟೈಟಲ್​ ಬದಲಾಯಿಸಲಾಯಿತು.

ಮುಸ್ಲಿಂ ಧರ್ಮದವರ ಭಾವನೆಗಳಿಗೆ ‘ಹಮಾರೆ ಬಾರಾಹ್​’ ಸಿನಿಮಾ ಧಕ್ಕೆ ಉಂಟು ಮಾಡಲಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಅಲ್ಲದೇ, ಖುರಾನ್​ನ ಭೋದನೆಗಳನ್ನು ತಪ್ಪಾಗಿ ಅರ್ಥೈಸಿದೆ ಎಂದು ಕಿರಿಕ್​ ಮಾಡಲಾಗಿತ್ತು. ಆದರೆ ಈ ಸಿನಿಮಾದಲ್ಲಿ ಆ ರೀತಿಯ ಯಾವುದೇ ಅಂಶಗಳು ಇಲ್ಲ ಎಂಬುದನ್ನು ಮನಗಂಡ ಬಳಿಕ ಬಾಂಬೆ ಹೈಕೋರ್ಟ್​ ಈ ಆದೇಶ ನೀಡಿದೆ.

ಅನ್ನು ಕಪೂರ್ ಅವರು ‘ಹಮಾರೆ ಬಾರಾಹ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆದ ನಂತರ ವಿವಾದ ಸೃಷ್ಟಿಯಾಗಿತ್ತು. ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಡಿಲೀಟ್​ ಮಾಡಬೇಕು ಎಂಬ ಒತ್ತಾಯ ಕೇಳಿಬಂತು. ನ್ಯಾಯಾಲಯದ ಸೂಚನೆ ಮೇರೆಗೆ ನಿರ್ಮಾಪಕರು ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಲು ಒಪ್ಪಿದ್ದಾರೆ. ಆದ್ದರಿಂದ ಸಿನಿಮಾದ ಬಿಡುಗಡೆಗೆ ಅನುಮತಿ ಸಿಕ್ಕಿದೆ.

ಇದನ್ನೂ ಓದಿ: ‘ಹಮಾರೆ ಬಾರಾ’ ವಿವಾದ; ಸೆನ್ಸಾರ್ ಮಂಡಳಿ ಓಕೆ ಹೇಳಿದ ಡೈಲಾಗ್​ಗೆ ಹೈಕೋರ್ಟ್ ತಕರಾರು

‘ಈ ಸಿನಿಮಾ ಮಹಿಳೆಯರ ಏಳಿಗೆಗಾಗಿ ಇರುವಂಥದ್ದು. ಖುರಾನ್​ ಅನ್ನು ತಪ್ಪಾಗಿ ಅರ್ಥೈಸುವ ಓರ್ವ ಮೌಲಾನಾನ ಪಾತ್ರ ಈ ಸಿನಿಮಾದಲ್ಲಿದೆ. ಆದರೆ ಬೇರೆ ಮುಸ್ಲಿಂ ವ್ಯಕ್ತಿ ಅದನ್ನು ವಿರೋಧಿಸುತ್ತಾನೆ. ಆ ರೀತಿಯ ಮೌಲಾನಾರನ್ನು ಜನರು ಕಣ್ಣು ಮುಚ್ಚಿಕೊಂಡು ಅನುಸರಿಸಬಾರದು. ತಮ್ಮ ಬುದ್ಧಿ ಉಪಯೋಗಿಸಬೇಕು ಎಂಬುದನ್ನು ಈ ಸಿನಿಮಾ ತೋರಿಸುತ್ತದೆ’ ಎಂದು ಕೋರ್ಟ್​ ಹೇಳಿದೆ.

ಪ್ರಮಾಣಪತ್ರ ಪಡೆಯದ ದೃಶ್ಯಗಳನ್ನು ಒಳಗೊಂಡ ಟ್ರೇಲರ್​ ಬಿಡುಗಡೆ ಮಾಡಿದ್ದಕ್ಕೆ ‘ಹಮಾರೆ ಬಾರಾಹ್​’ ಸಿನಿಮಾದ ನಿರ್ಮಾಪಕರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆರಂಭದಲ್ಲಿ ಜೂನ್​ 7ರಂದು ಈ ಸಿನಿಮಾವನ್ನು ರಿಲೀಸ್​ ಮಾಡಲು ತೀರ್ಮಾನಿಸಲಾಗಿತ್ತು. ನಂತರ ಜೂನ್​ 14ಕ್ಕೆ ಮುಂದೂಡಿಕೆ ಆಗಿತ್ತು. ಬಳಿಕ ಬಿಡುಗಡೆಗೆ ತಡೆ ನೀಡಲಾಯಿತು. ಈಗ ಹೊಸ ರಿಲೀಸ್​ ದಿನಾಂಕವನ್ನು ನಿರ್ಮಾಪಕರು ಇನ್ನಷ್ಟೇ ಘೋಷಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.