ತೆಲುಗು ಚಿತ್ರರಂಗವನ್ನು (Tollywood) ದಶಕಗಳ ಕಾಲ ಆಳಿದ ನಟಿ ಅನುಷ್ಕಾ ಶೆಟ್ಟಿ. ಸ್ಟಾರ್ ನಟರ ಮಟ್ಟಿಗೆ ಅಭಿಮಾನಿಗಳಲ್ಲಿ ಕ್ರೇಜ್ ಹೊಂದಿದ್ದ ಅನುಷ್ಕಾ ಶೆಟ್ಟಿ, ನಟಿಸದ ಸ್ಟಾರ್ ನಟರು ತೆಲುಗು ಚಿತ್ರರಂಗದಲ್ಲಿಲ್ಲ, ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಹಲವು ಸ್ಟಾರ್ ನಟರೊಟ್ಟಿಗೆ, ನಿರ್ದೇಶಕರೊಟ್ಟಿಗೆ ಅನುಷ್ಕಾ ಶೆಟ್ಟಿ ಕೆಲಸ ಮಾಡಿದ್ದಾರೆ. ಬಹಳ ಬ್ಯುಸಿಯಾಗಿದ್ದ ಅನುಷ್ಕಾ ಶೆಟ್ಟಿ, ‘ಬಾಹುಬಲಿ‘ (Bahubali) ಅಂಥಹಾ ಹಿಟ್ ಸಿನಿಮಾ ನೀಡಿದ ಬಳಿಕ ಚಿತ್ರರಂಗದಿಂದ ಅಚಾನಕ್ಕಾಗಿ ದೂರಾಗಿಬಿಟ್ಟರು. ಇದಕ್ಕೆ ಕಾರಣವೇನು ಎಂಬುದನ್ನೇ ಅವರೇ ವಿವರಿಸಿದ್ದಾರೆ.
‘ಬಾಹುಬಲಿ’ ಮಾಡುವಾಗಲೇ ನಾನು ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೆ. ಆ ಸಮಯದಲ್ಲಿ ನನಗೆ ಬ್ರೇಕ್ ಎಂಬುದು ಬಹಳ ಅವಶ್ಯಕವಾಗಿತ್ತು. ‘ಬಾಹುಬಲಿ’ ಸಿನಿಮಾ ಮುಗಿದ ಬಳಿಕ ಮುಂಚೆಯೇ ಒಪ್ಪಂದ ಆಗಿದ್ದ ‘ಭಾಗಮತಿ’ ಸಿನಿಮಾದ ಕೆಲಸ ಮುಗಿಸಿ ನಾನು ಬ್ರೇಕ್ ತೆಗೆದುಕೊಂಡೆ. ಕೆಲವು ವರ್ಷ ಯಾವೊಂದು ಚಿತ್ರಕತೆಯನ್ನು ಸಹ ನಾನು ಕೇಳಲಿಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ವಿಮುಖವಾಗಿದ್ದೆ” ಎಂದಿದ್ದಾರೆ ಅನುಷ್ಕಾ ಶೆಟ್ಟಿ.
‘ಬಾಹುಬಲಿ’ ಅಂಥಹಾ ದೊಡ್ಡ ಹಿಟ್ ಸಿನಿಮಾ ನೀಡಿದ ಬಳಿಕ ಅದರ ಲಾಭ ತೆಗೆದುಕೊಳ್ಳಬೇಕು ಎಂದು ಹಲವರು ಬಯಸುವುದು ಸಹಜ. ಆದರೆ ನನಗೆ ಅದರ ಅವಶ್ಯಕತೆ ಇರಲಿಲ್ಲ. ನನಗೆ ನನ್ನ ವೃತ್ತಿ ಜೀವನದಿಂದ ಒಂದು ಬ್ರೇಕ್ ಬೇಕಿತ್ತು ಹಾಗಾಗಿ ಬ್ರೇಕ್ ತೆಗೆದುಕೊಂಡೆ. ಆ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಿಶ್ಯಬ್ಧಂ ಸಿನಿಮಾದಲ್ಲಿ ನಟಿಸಿದೆ. ಈಗ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದೇನೆ ಎಂದಿದ್ದಾರೆ.
ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಾನು ಕತೆಗಳನ್ನು ಕೇಳುತ್ತೇನೆ. ಒಳ್ಳೆಯ ಕತೆ ಸಿಕ್ಕರೆ ಭಾರತದ ಯಾವುದೇ ಭಾಷೆಯಲ್ಲಾಗಲಿ ನಟಿಸಲು ಸಿದ್ಧ ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಪ್ರಸ್ತುತ ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಪದಾರ್ಪಣೆ ಮಾಡಿದ್ದು, ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ನವೀನ್ ಪೋಲಿಶೆಟ್ಟಿ ಜೊತೆ ನಟಿಸಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ:ಅನುಷ್ಕಾ ಶೆಟ್ಟಿ ಹೊಸ ಚಿತ್ರ ನೋಡಿ ಸಿಕ್ಕಾಪಟ್ಟೆ ನಕ್ಕ ಸಮಂತಾ ರುತ್ ಪ್ರಭು
ಅನುಷ್ಕಾ ಶೆಟ್ಟಿ ಮೂಲತಃ ಕರ್ನಾಟಕದ ಚೆಲುವೆ. ಕನ್ನಡದ ‘ಮಿಸ್ ಕ್ಯಾಲಿಫೋರ್ನಿಯಾ’ ಹೆಸರಿನ ಸಿನಿಮಾಕ್ಕೆ ಆಡಿಷನ್ ನೀಡಿದ್ದರು, ಆದರೆ ಬೇರೆ ನಟಿಯನ್ನು ಆ ಸಿನಿಮಾಕ್ಕೆ ಆರಿಸಿಕೊಳ್ಳಬೇಕಾಯ್ತು. ಈಗಲೂ ಸ್ಪಷ್ಟವಾಗಿ ಕನ್ನಡ ಮಾತನಾಡುವ ಅನುಷ್ಕಾ, ತಮ್ಮ ಹಿರಿಕರ ಮನೆಗೆ ಆಗಾಗ್ಗೆ ಬಂದು ಹೋಗುತ್ತಲೇ ಇರುತ್ತಾರೆ. 2005 ರಲ್ಲಿ ಬಿಡುಗಡೆ ಆದ ‘ಸೂಪರ್’ ಸಿನಿಮಾದಿಂದ ನಟನೆ ಆರಂಭಿಸಿದ ಅನುಷ್ಕಾ ಶೆಟ್ಟಿ 2018ರ ವರೆಗೆ ತೆಲುಗು ಚಿತ್ರರಂಗದ ಬೇಡಿಕೆಯ ನಟಿ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ