‘ಬಾಹುಬಲಿ’, ‘ಕೆಜಿಎಫ್2’ ಬಳಿಕ ಹೊಸ ದಾಖಲೆ ಬರೆದ ‘ಜೈಲರ್’
Jailer: ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ಕೆಲವೇ ದಿನಗಳಲ್ಲಿ 500 ಕೋಟಿ ಕಲೆಕ್ಷನ್ ದಾಟಿದೆ. ಇದೀಗ ಹೊಸದೊಂದು ದಾಖಲೆ ಬರೆದು, 'ಕೆಜಿಎಫ್ 2', 'ಬಾಹುಬಲಿ 2' ಸಿನಿಮಾಗಳ ಸಾಲಿಗೆ ಸೇರಿಕೊಂಡಿದೆ.
ರಜನೀಕಾಂತ್ (Rajinikanth) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್’ ಸೂಪರ್ ಡೂಪರ್ ಹಿಟ್ ಆಗಿದೆ. ರಜನೀಕಾಂತ್ರ ಈ ಹಿಂದಿನ ಯಾವುದೇ ಸಿನಿಮಾಗಳು ಗಳಿಸದಷ್ಟು ದೊಡ್ಡ ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಬಾಚುತ್ತಿದೆ. ಕಮಲ್ ಹಾಸನ್ರ ವಿಕ್ರಂ ಸಿನಿಮಾವನ್ನು ಸಹ ‘ಜೈಲರ್’ ಸಿನಿಮಾ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದರ ನಡುವೆ ಈ ಸಿನಿಮಾ ದಕ್ಷಿಣ ಭಾರತದಲ್ಲಿ ಹೊಸದೊಂದು ದಾಖಲೆಯನ್ನು ಸಹ ಸೃಷ್ಟಿಸಿದೆ.
ಹೌದು, ‘ಜೈಲರ್’ ಸಿನಿಮಾ ಬಿಡುಗಡೆ ಆಗಿ ಎರಡು ವಾರವಾಗಿದ್ದು 500 ಕೋಟಿಗೂ ಹೆಚ್ಚು ಹಣ ಈ ವರೆಗೆ ಕಲೆಕ್ಷನ್ ಮಾಡಿದೆ. ಮತ್ತೊಂದು ವಿಶೇಷವೆಂದರೆ ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ 50 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿಗೆ ‘ಜೈಲರ್’ ಪಾತ್ರವಾಗಿದೆ. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ 50 ಕೋಟಿ ಹಣ ಗಳಸಿದ ಸಿನಿಮಾಗಳು ಕೇವಲ ಎರಡೇ ಆಗಿದ್ದವು, ಈಗ ಮೂರನೇ ಸಿನಿಮಾ ಆಗಿ ‘ಜೈಲರ್’ ಸೇರಿಕೊಂಡಿದೆ.
‘ಜೈಲರ್’ ಸಿನಿಮಾವು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ 50 ಕೋಟಿ ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಕಲೆ ಹಾಕಿದೆ. ಮತ್ತೊಂದು ವಿಶೇಷವೆಂದರೆ ಕೇರಳದಲ್ಲಿ 50 ಕೋಟಿ ಹಣ ಗಳಿಸಿದ ಏಕೈಕ ತಮಿಳು ಸಿನಿಮಾ ಎಂಬ ಖ್ಯಾತಿಗೆ ಸಹ ‘ಜೈಲರ್’ ಪಾತ್ರವಾಗಿದೆ. ಇದಕ್ಕೆ ಮುನ್ನ ಇನ್ಯಾವುದೇ ತಮಿಳು ಸಿನಿಮಾಗಳು ಕೇರಳದಲ್ಲಿ 50 ಕೋಟಿ ಹಣ ಗಳಿಸಿರಲಿಲ್ಲ.
‘ಜೈಲರ್’ ಸಿನಿಮಾಕ್ಕೆ ಮುನ್ನ ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ 50 ಕೋಟಿ ಗಳಿಸಿದ್ದು ಕೇವಲ ಎರಡೇ ಅವು, ‘ಬಾಹುಬಲಿ 2’ ಹಾಗೂ ‘ಕೆಜಿಎಫ್ 2’. ಈ ಎರಡು ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದವು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದ್ದವು, ಬಿಡುಗಡೆ ಆದ ಭಾಷೆಗಳಲ್ಲೆಲ್ಲ 50 ಕೋಟಿಗೂ ಹೆಚ್ಚು ಹಣ ಗಳಿಸಿದ್ದವು.
ಇನ್ನು ‘ಜೈಲರ್’ ಸಿನಿಮಾಕ್ಕೆ ಮರಳುವುದಾದರೆ ಈ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಸಿದ್ದು, ಕನ್ನಡದ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್ಲಾಲ್, ಹಿಂದಿಯ ಜಾಕಿ ಶ್ರಾಫ್, ತೆಲುಗಿನ ಸುನಿಲ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಶಿವರಾಜ್ ಕುಮಾರ್ ಪಾತ್ರವಂತೂ ಸೂಪರ್ ಡೂಪರ್ ಹಿಟ್ ಆಗಿದೆ.