ಶ್ರೀಲೀಲಾ, ತೆಲುಗು ಚಿತ್ರರಂಗಕ್ಕೆ ಸಿಕ್ಕ ಸರಸ್ವತಿ ವರಪ್ರಸಾದ ಎಂದ ಬಾಲಕೃಷ್ಣ

Shreeleela: ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಕನ್ನಡದ ನಟಿ ಶ್ರೀಲೀಲಾ ಬಗ್ಗೆ ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಬಹು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಶ್ರೀಲೀಲಾ, ತೆಲುಗು ಚಿತ್ರರಂಗಕ್ಕೆ ಸಿಕ್ಕ ಸರಸ್ವತಿ ವರಪ್ರಸಾದ ಎಂದ ಬಾಲಕೃಷ್ಣ
ಬಾಲಯ್ಯ-ಶ್ರೀಲೀಲಾ
Follow us
ಮಂಜುನಾಥ ಸಿ.
|

Updated on: Aug 27, 2023 | 9:34 PM

ಕನ್ನಡದ ನಟಿ ಶ್ರೀಲೀಲಾ (Sreeleela) ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ನಟಿಯ ನಟನೆ, ನೃತ್ಯಕ್ಕೆ ಮೆಚ್ಚಿ ತೆಲುಗಿನ ಸ್ಟಾರ್ ಹೀರೋಗಳೇ ಫಿದಾ ಆಗಿದ್ದಾರೆ. ರವಿತೇಜ, ಮಹೇಶ್ ಬಾಬು, ಬಾಲಕೃಷ್ಣ, ಅಲ್ಲು ಅರ್ಜುನ್ ಅಂಥಹ ಸ್ಟಾರ್ ನಟರ ಸಿನಿಮಾಗಳಿಗೆ ಆಯ್ಕೆ ಆಗಿದ್ದಾರೆ ನಟಿ ಶ್ರೀಲೀಲಾ. ನಂದಮೂರಿ ಬಾಲಕೃಷ್ಣ ಅಂತೂ, ಶ್ರೀಲೀಲಾ, ತೆಲುಗು ಚಿತ್ರರಂಗಕ್ಕೆ ಸಿಕ್ಕ ಸರಸ್ವತಿ ವರ ಪ್ರಸಾದ ಎಂದೇ ಹೊಗಳಿ ಕೊಂಡಾಡಿದ್ದಾರೆ.

ಶ್ರೀಲೀಲಾ ನಟಿಸಿರುವ ‘ಸ್ಕಂದ’ ಹೆಸರಿನ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಂದಮೂರಿ ಬಾಲಕೃಷ್ಣ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಎಂದಿನ ಶೈಲಿಯಲ್ಲಿ ತಡವರಿಸುತ್ತಾ ಸಂಸ್ಕೃತ ಮಂತ್ರವೊಂದನ್ನು ತಪ್ಪು ತಪ್ಪಾಗಿ ಹೇಳಿ ಬಳಿಕ ಸಿನಿಮಾದ ನಾಯಕ ರಾಮ್ ಪೋತಿನೇನಿ ಹಾಗೂ ನಿರ್ದೇಶಕ ಬೊಯಪಾಟಿ ಸೀನು ಅವರಿಬ್ಬರನ್ನು ಬಹುವಾಗಿ ಹೊಗಳಿ ಆ ನಂತರ ನಟಿ ಶ್ರೀಲೀಲಾ ಬಗ್ಗೆ ಮಾತು ಆರಂಭಿಸಿದರು.

”ಶ್ರೀಲೀಲಾ ಸಂಪ್ರದಾಯಬದ್ಧ ತೆಲುಗು ಹುಡುಗಿ. ತೆಲುಗು ಚಿತ್ರರಂಗಕ್ಕೆ ಹಲವು ನಟಿಯರು ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗಿದೆ. ಹಾಗೆಯೇ ಶ್ರೀಲೀಲಾಗೂ ಸಹ ಇಲ್ಲಿ ಬಹಳ ಒಳ್ಳೆಯ ಭವಿಷ್ಯವಿದೆ” ಎಂದ ಬಾಲಕೃಷ್ಣ ಶ್ರೀಲೀಲಾ ಅಂದದ ಬಗ್ಗೆ ಹಿಂದಿಯಲ್ಲಿ ಯಾರಿಗೂ ಅರ್ಥವಾಗದಂಥಹಾ ಡೈಲಾಗ್ ಒಂದನ್ನು ಸಹ ಹೊಡೆದರು. ಬಾಲಕೃಷ್ಣ ಡೈಲಾಗ್​ಗೆ ಶ್ರೀಲೀಲಾ ಸಹಿತ ಎಲ್ಲರೂ ನಕ್ಕರಾದರೂ ಯಾರಿಗೂ ಅರ್ಥವಾಗಲಿಲ್ಲ.

ಇದನ್ನೂ ಓದಿ:‘ಗಂಡರಬಾಯ್..’ ಹಾಡಿನಲ್ಲಿ ಹೇಗಿದೆ ನೋಡಿ ಶ್ರೀಲೀಲಾ ಅವತಾರ; ಫೋಟೋ ಮೂಲಕ ವಿವರಿಸಿದ ನಟಿ

ಮುಂದುವರೆದು, ”ಶ್ರೀಲೀಲಾಗೆ ಅಂದವಿದೆ, ಅಂದದ ಜೊತೆಗೆ ಅಭಿನಯವೂ ಇದೆ. ಅಭಿನಯದ ಜೊತೆಗೆ ನಾಟ್ಯವೂ ಇದೆ. ಇವೆಲ್ಲವನ್ನೂ ಸೇರಿಸಿ ನಮಗೆ ಸಿಕ್ಕಿರುವ ಒಳ್ಳೆಯ ನಟಿ. ಸರಸ್ವತಿ ದೇವಿಯ ವರ ಪ್ರಸಾದ. ನಾನೂ ಸಹ ಅವರೊಟ್ಟಿಗೆ ಭಗವಂತ್ ಕೇಸರಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೆಟ್​ನಲ್ಲಿ ಅವರ ಶ್ರಮ, ಪ್ರತಿ ಸೀನ್ ಮಾಡುವಾಗಲೂ ತೋರುವ ಶ್ರದ್ಧೆಯನ್ನು ಪ್ರತಿದಿನವೂ ನೋಡುತ್ತಿದ್ದೇನೆ. ಇಷ್ಟು ಒಳ್ಳೆಯ ನಟಿಯಾಗಿದ್ದರೂ, ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಾಮಾನ್ಯರಂತೆ ವರ್ತಿಸುತ್ತಾರೆ ಅದು ನನಗೆ ಬಹಳ ಇಷ್ಟವಾಗುತ್ತದೆ. ಆಕೆಗೆ ಒಳ್ಳೆಯ ಭವಿಷ್ಯ ಸಿಗಲಿ” ಎಂದಿದ್ದಾರೆ ಬಾಲಕೃಷ್ಣ.

ಶ್ರೀಲೀಲಾ ಈಗಾಗಲೇ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಂತು ತೆಲುಗು ಸಿನಿಮಾ ನಿರ್ದೇಶಕರಿಗೆ ಹಾಟ್ ಫೇವರೇಟ್ ಆಗಿದ್ದಾರೆ ಶ್ರೀಲೀಲಾ. ರವಿತೇಜ ಜೊತೆಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಕೃಷ್ಣ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿಯೂ ಶ್ರೀಲೀಲಾ ನಾಯಕಿ. ಅಲ್ಲು ಅರ್ಜುನ್ ಮುಂದಿನ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ