ಒಂದು ಸಿನಿಮಾ ಹಲವು ಕಲಾವಿದರ, ತಂತ್ರಜ್ಞರ ಬದುಕನ್ನು ಬದಲಾಯಿಸಿ ಬಿಡುತ್ತದೆ. ಇದಕ್ಕೆ ತೆಲುಗು ಕಾಮಿಡಿಯನ್ ರಾಹುಲ್ ರಾಮಕೃಷ್ಣ (Rahul Ramakrishna) ಕೂಡ ಒಬ್ಬರು. 2017ರಲ್ಲಿ ತೆರೆಗೆ ಬಂದ ‘ಅರ್ಜುನ್ ರೆಡ್ಡಿ’ (Arjun Reddy)ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅರ್ಜುನ್ ರೆಡ್ಡಿ ಗೆಳೆಯನ ಪಾತ್ರ ಮಾಡಿದ್ದರು ರಾಹುಲ್. ಈ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಗೀತ ಗೋವಿಂದಂ’ ಸಿನಿಮಾದಲ್ಲೂ ಅವರು ಹೀರೋನ ಗೆಳೆಯನ ಪಾತ್ರ ಮಾಡಿದ್ದರು. ರಾಹುಲ್ಗೆ ಈಗ ಸಾಕಷ್ಟು ಆಫರ್ಗಳು ಬರುತ್ತಿವೆ. ಕೆಲವೇ ವರ್ಷಗಳಲ್ಲಿ ಅವರ ಜೀವನ ಬದಲಾಗಿದೆ. ಆದರೆ, ಶಾಕಿಂಗ್ ವಿಚಾರ ಎಂದರೆ ಅವರು ಚಿತ್ರರಂಗ ತೊರೆಯೋಕೆ ನಿರ್ಧರಿಸಿದ್ದಾರೆ. ಶುಕ್ರವಾರ (ಫೆಬ್ರವರಿ 4) ರಾತ್ರಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ.
ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅದನ್ನು ತೊರೆಯೋಕೆ ಯಾರೂ ಇಷ್ಟಪಡುವುದಿಲ್ಲ. ಆದರೆ, ಆ ರೀತಿ ಮಾಡಿದ ಉದಾಹರಣೆ ಕೂಡ ಇದೆ. ನಟಿ ರಮ್ಯಾ ಕೂಡ ಚಿತ್ರರಂಗದಲ್ಲಿ ಬೇಡಿಕೆ ಇದ್ದಾಗಲೇ ಅದನ್ನು ತೊರೆದು ರಾಜಕೀಯ ಸೇರಿದರು. ನಂತರ ಅವರು ಮರಳಿ ಚಿತ್ರರಂಗಕ್ಕೆ ಬರಲೇ ಇಲ್ಲ. ಇದೇ ರೀತಿಯ ಕೆಲವು ಉದಾಹರಣೆಗಳು ಸಿಗುತ್ತವೆ. ಈಗ ರಾಹುಲ್ ರಾಮಕೃಷ್ಣ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷ ಮಾತ್ರ ಅವರು ಚಿತ್ರರಂಗದಲ್ಲಿ ಇರಲಿದ್ದಾರಂತೆ. ಆ ಬಳಿಕ ಅವರು ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾರೆ!
‘ಈ ವರ್ಷವೇ ಕೊನೆ. ಆ ಬಳಿಕ ನಾನು ಯಾವುದೇ ಸಿನಿಮಾ ಮಾಡುವುದಿಲ್ಲ. ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಈ ಬಗ್ಗೆ ಚಿಂತಿಸಬೇಡಿ’ ಎಂದು ಬರೆದುಕೊಂಡಿದ್ದಾರೆ ರಾಹುಲ್. ಇದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಗಂಭೀರವಾಗಿ ತೆಗೆದುಕೊಂಡರೆ ಇನ್ನೂ ಕೆಲವರು ಇದನ್ನು ಹಗುರವಾಗಿ ಪರಿಗಣಿಸಿದ್ದಾರೆ.
2022 is my last.
I will not do films anymore.
Not that I care, nor should anybody care— Rahul Ramakrishna (@eyrahul) February 4, 2022
‘ಎಲ್ಲರ ಗಮನ ಸೆಳೆಯೋಕೆ ಈ ರೀತಿಯ ಗಿಮಿಕ್ಗಳನ್ನು ಚಿತ್ರರಂಗದವರು ಮಾಡೋದನ್ನು ನೋಡಿದ್ದೇವೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ರಾಹುಲ್ ಅವರ ಖಾತೆ ಹ್ಯಾಕ್ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ಕೆಲವರನ್ನು ಇದನ್ನು ಟೀಕಿಸಿದ್ದಾರೆ. ‘ಇದು ವೋಡ್ಕಾ ಎಫೆಕ್ಟ್. ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಸರಿಯಾಗುತ್ತದೆ’ ಎಂದಿದ್ದಾರೆ. ಈ ಬಗ್ಗೆ ರಾಹುಲ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ. ಅವರು ಚಿತ್ರರಂಗ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.
ಇದನ್ನೂ ಓದಿ: ಧೂಳೆಬ್ಬಿಸಿದ ‘ಲೈಗರ್’ ಗ್ಲಿಂಪ್ಸ್ ವಿಡಿಯೋ; ವಿಜಯ್ ದೇವರಕೊಂಡಗೆ ಭಾರೀ ಮೆಚ್ಚುಗೆ
ವಿಜಯ್ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ