ತಮಿಳು ಯುವನಟನೊಟ್ಟಿಗೆ ಅರ್ಜುನ್ ಸರ್ಜಾ ಪುತ್ರಿ ಮದುವೆ ಶೀಘ್ರ
Arjun Sarja: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಮದುವೆ ತಮಿಳು ಚಿತ್ರರಂಗದ ಹಾಸ್ಯನಟ ತಂಬಿ ರಾಮಯ್ಯ ಪುತ್ರನೊಟ್ಟಿಗೆ ಆಗಲಿದೆಯಂತೆ.
ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Arjun) ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯಾ ಸರ್ಜಾ ಮದುವೆ ಮಾತುಕತೆ ಬಹುತೇಕ ಪೂರ್ಣಗೊಂಡಿದ್ದು ತಮಿಳಿನ ಯುವನಟರೊಬ್ಬರೊಟ್ಟಿಗೆ ಐಶ್ವರ್ಯಾ ಮದುವೆ (Marriage) ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳು ವರದಿ ಸಹ ಮಾಡಿವೆ.
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಟ್ಟಿಗೆ ಐಶ್ವರ್ಯಾ ಮದುವೆ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾಗುತ್ತಿದೆ. ತಂಬಿ ರಾಮಯ್ಯ ತಮಿಳಿನ ಜನಪ್ರಿಯ ಹಾಸ್ಯನಟರಾಗಿದ್ದು 1999 ರಿಂದ ಈಗಿನ ವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರ ಪುತ್ರ ಉಮಾಪತಿ ರಾಮಯ್ಯ ಸಹ ನಟರಾಗಿದ್ದು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.
ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಮೊದಲಿನಿಂದಲೂ ಪ್ರೇಮಿಗಳಾಗಿದ್ದು ಇದೀಗ ಇಬ್ಬರ ಕುಟುಂಬದವರೂ ಒಪ್ಪಿ ಜೋಡಿಯ ಮದುವೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಮದುವೆ ಬಗ್ಗೆ ಸರ್ಜಾ ಕುಟುಂಬವಾಗಲಿ ರಾಮಯ್ಯ ಕುಟುಂಬವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ ಆದರೆ ತಮಿಳು ಚಿತ್ರರಂಗದ ಕೆಲವು ಹಿರಿಯ ಪತ್ರಕರ್ತರು ರಾಮಯ್ಯ ಕುಟುಂಬದ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:MM Keeravani: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ 2013 ರಲ್ಲಿ ವಿಶಾಲ್ ನಟನೆಯ ಪತ್ತು ಯಾನೈ ಸಿನಿಮಾ ಮೂಲಕ ಪದಾರ್ಪಣೆ ಮಾಡಿದರು. ಆದರೆ ಅದಾದ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. 2018ರಲ್ಲಿ ಕನ್ನಡದ ಪ್ರೇಮ ಬರಹ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾವನ್ನು ಐಶ್ವರ್ಯಾರ ತಂದೆ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡಿದ್ದರು. ಕನ್ನಡದ ಪ್ರೇಮ ಬರಹ ಸಿನಿಮಾವನ್ನು ತಮಿಳಿನಲ್ಲಿ ಸೊಲ್ಲಿವಿಡಾವಾ ಹೆಸರಿನಲ್ಲಿ ಕೆಲ ದೃಶ್ಯಗಳನ್ನು ಮರುಚಿತ್ರೀಕರಿಸಿ ಬಿಡುಗಡೆ ಮಾಡಲಾಗಿತ್ತು. ಎರಡೂ ಭಷೆಗಳಲ್ಲಿ ಸಿನಿಮಾ ಮ್ಯಾಜಿಕ್ ಮಾಡಲು ವಿಫಲವಾಯಿತು. ಆ ನಂತರ ಐಶ್ವರ್ಯಾಗೆ ಹೆಚ್ಚಿನ ಅವಕಾಶಗಳು ಲಭಿಸಲಿಲ್ಲ.
ಇನ್ನು ಉಮಾಪತಿ ರಾಮಯ್ಯ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. 2017ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉಮಾಪತಿ ಆಗಿನಿಂದ ವರ್ಷಕ್ಕೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. 2020 ರಲ್ಲಿ ಉಮಾಪತಿಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. 2022 ರಲ್ಲಿ ದೇವದಾಸ್ ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದು ಈ ವರೆಗೆ ಆ ಸಿನಿಮಾ ಬಿಡುಗಡೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ