
ಸ್ಟಾರ್ ನಟ ಅರ್ಜುನ್ ಸರ್ಜಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತೀಚೆಗಷ್ಟೆ ಅರ್ಜುನ ಸರ್ಜಾ ಅವರು ತಮ್ಮ ಕಿರಿಯ ಪುತ್ರಿಯನ್ನು ವಿದೇಶಿ ವರನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಆದರೆ ಅದೆಲ್ಲ ಕಳೆದು ಕೆಲವೇ ದಿನಗಳಲ್ಲಿ ಇದೀಗ ಅರ್ಜುನ್ ಸರ್ಜಾ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ತಮ್ಮ ಹಿರಿಯ ಪುತ್ರಿ ಮತ್ತು ಅವರ ಪತಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದು, ತಮ್ಮ ಹಿರಿಯ ಮಗಳು, ನಟಿ ಐಶ್ವರ್ಯ ಅರ್ಜುನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹರಡಿರುವ ಆಧಾರರಹಿತ ಹಾಗೂ ಅವಹೇಳನಕಾರಿ ಆರೋಪಗಳನ್ನು ಖಂಡಿಸಿದ್ದಾರೆ.
ಅರ್ಜುನ್ ಅವರ ಕಿರಿಯ ಮಗಳು ಅಂಜನಾ ಈ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ದೀರ್ಘಕಾಲದ ಸಂಗಾತಿ ಇಸೈ ಅವರನ್ನು ವಿವಾಹವಾದರು. ಅರ್ಜುನ್ ಸರ್ಜಾ ಅವರ ಕುಟುಂಬ ಸದಸ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಹಿರಿಯ ಪುತ್ರಿ ಐಶ್ವರ್ಯ ಅವರ ಪತಿ, ನಟ ಉಮಾಪತಿ ರಾಮಯ್ಯ ಆ ಸಮಾರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ಕಾರಣಕ್ಕೆ ಐಶ್ವರ್ಯ ಅವರ ದಾಂಪತ್ಯದ ಬಗ್ಗೆ ವದಂತಿಗಳು ಹಬ್ಬಿದವು. ಕೆಲವರು ಅವರ ವೈಯಕ್ತಿಕ ಅಭ್ಯಾಸಗಳ ಬಗ್ಗೆಯೂ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದರು ಎನ್ನಲಾಗಿದೆ.
ಈ ಕುರಿತು ಚೆನ್ನೈ ಪೊಲೀಸರಿಗೆ ದೂರು ನೀಡಿರುವ ನಟ ಅರ್ಜುನ್ ಸರ್ಜಾ, ಮಗಳು ಐಶ್ವರ್ಯಾಗೆ ಗೌರವ, ಸ್ವತಂತ್ರ ಮತ್ತು ಘನತೆಯಿಂದ ಬದುಕುವ ಹಕ್ಕಿದೆ, ಆ ಹಕ್ಕಿಗೆ ತಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದಿದ್ದಾರೆ. ಈ ರೀತಿ ಇಲ್ಲದ ಆರೋಪಗಳನ್ನು ಇನ್ನಷ್ಟು ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ತಂದೆಯಾಗಿ ಮಗಳ ಬಗ್ಗೆ ಪುರಾವೆಯಿಲ್ಲದ ಆರೋಪಗಳನ್ನು ನೋಡಿ ಮೌನವಾಗಿರಲು ಸಾಧ್ಯವಿಲ್ಲ, ತಮ್ಮ ಕುಟುಂಬ ವಿವಾದಗಳಿಂದ ದೂರವಿರಲು ಬಯಸುತ್ತದೆ, ಆದರೆ ಆ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು, ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ತೀರ್ಪು ನೀಡುವ ಪ್ರವೃತ್ತಿ ಅಪಾಯಕಾರಿ ಎಂದಿದ್ದಾರೆ.
ಇದನ್ನೂ ಓದಿ:ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ; ಸತ್ಯ ಬಿಚ್ಚಿಟ್ಟ ನಟಿ ಮೇಘನಾ ರಾಜ್
ಕೆಲವು ದಿನಗಳ ಹಿಂದೆ ಉಮಾಪತಿ ಅವರ ತಂದೆ, ನಟ ತಂಬಿ ರಾಮಯ್ಯ ಅವರು ವಿಚ್ಛೇದನದ ಸುದ್ದಿ ಕೇವಲ ಗಾಳಿಸುದ್ದಿ ಎಂದು ಸ್ಪಷ್ಟಪಡಿಸಿದ್ದರು. ಇಬ್ಬರೂ ಚೆನ್ನೈ ನಿವಾಸದಲ್ಲಿ ಒಟ್ಟಿಗೆ, ಸಂತೋಷವಾಗಿದ್ದಾರೆ ಎಂದು ಅವರು ಹೇಳಿದ್ದರು. ಐಶ್ವರ್ಯ ಮತ್ತು ಉಮಾಪತಿ 2024ರ ಜೂನ್‌ನಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. ಆದರೆ ಈಗ ಒಂದು ಮದುವೆಯಲ್ಲಿ ಕಾಣಿಸಿಕೊಳ್ಳಲಿಲ್ಲವೆಂದು ಇಬ್ಬರ ದಾಂಪತ್ಯದ ಬಗ್ಗೆ ಇಲ್ಲ-ಸಲ್ಲದ ಸುದ್ದಿಗಳನ್ನು ಹರಿಯ ಬಿಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Thu, 19 November 26