‘ನನ್ನ ಹೆಸರು ದಾವೂದ್ ವಾಂಖೆಡೆಯಲ್ಲ’; ನವಾಬ್ ಮಲಿಕ್ ಆರೋಪಕ್ಕೆ ಸಮೀರ್ ವಾಂಖೆಡೆ ತಂದೆ ಸ್ಪಷ್ಟನೆ

| Updated By: ಸುಷ್ಮಾ ಚಕ್ರೆ

Updated on: Oct 26, 2021 | 1:57 PM

Sameer Wankhede: ನಾನು ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಹಾಗೇ, ರಾಜ್ಯ ಸರ್ಕಾರದ ಇಲಾಖೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದೇನೆ. ನನ್ನ ಹೆಸರು ಜ್ಞಾನದೇವ್ ಅಲ್ಲ ಮತ್ತು ದಾವೂದ್ ವಾಂಖೆಡೆ ಎಂದಾಗಿದ್ದರೆ ಇದುವರೆಗೂ ಯಾರೊಬ್ಬರಿಗಾದರೂ ಆ ವಿಷಯ ಗೊತ್ತಿರಬೇಕಿತ್ತಲ್ಲ ಎಂದು ಸಮೀರ್ ವಾಂಖೆಡೆ ಅವರ ತಂದೆ ಪ್ರಶ್ನಿಸಿದ್ದಾರೆ.

ನನ್ನ ಹೆಸರು ದಾವೂದ್ ವಾಂಖೆಡೆಯಲ್ಲ; ನವಾಬ್ ಮಲಿಕ್ ಆರೋಪಕ್ಕೆ ಸಮೀರ್ ವಾಂಖೆಡೆ ತಂದೆ ಸ್ಪಷ್ಟನೆ
ಸಮೀರ್ ವಾಂಖೆಡೆ
Follow us on

ಮುಂಬೈ: ಡ್ರಗ್ಸ್​ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್ (Aryan Khan) ವಿಚಾರಣೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ವಿರುದ್ಧ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ (Nawab Malik) ಪದೇಪದೆ ಆರೋಪ ಮಾಡುತ್ತಿದ್ದಾರೆ. ಸಮೀರ್ ವಾಂಖೆಡೆ ತಮ್ಮ ವೈಯಕ್ತಿಕ ದಾಖಲೆ ಹಾಗೂ ಜನ್ಮ ಪ್ರಮಾಣ ಪತ್ರವನ್ನು ನಕಲು ಮಾಡಿದ್ದಾರೆ. ಅವರು ಹುಟ್ಟಿನಿಂದ ಮುಸ್ಲಿಂ ಆಗಿದ್ದು, ಅವರ ನಿಜವಾದ ಹೆಸರು ಸಮೀರ್ ದಾವೂದ್ ವಾಂಖೆಡೆ ಎಂದು ನಿನ್ನೆಯಷ್ಟೇ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿರುವ ಸಮೀರ್ ವಾಂಖೆಡೆ, ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ನವಾಬ್ ಮಲಿಕ್ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನೂ ಬಂಧಿಸಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ, ತನಿಖೆಯ ಹಾದಿ ತಪ್ಪಿಸಲು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಕುರಿತು ಸಮೀರ್ ವಾಂಖೆಡೆ ಅವರ ತಂದೆ ಕೂಡ ಎನ್​ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಡ್ರಗ್ಸ್​ ಪ್ರಕರಣದಲ್ಲಿ ನವಾಬ್ ಮಲಿಕ್ ಬಹಳ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ನನ್ನ ಹೆಸರು ದಾವೂದ್ ವಾಂಖೆಡೆ ಎಂಬುದು ಸಂಪೂರ್ಣ ಸುಳ್ಳು. ನನ್ನ ಮಗ ಸಮೀರ್ ವಾಂಖೆಡೆಯ ಜನ್ಮ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿ ನಮ್ಮನ್ನು ದೂಷಿಸುವ ಹಿಂದೆ ಮಲಿಕ್‌ನ ಕೆಲವು ದುರುದ್ದೇಶಗಳಿವೆ. ನಾನು ಹುಟ್ಟಿದಾಗಿನಿಂದಲೂ ನನ್ನ ಹೆಸರು ಜ್ಞಾನದೇವ್ ವಾಂಖೆಡೆ ಮತ್ತು ಅದು ಈಗಲೂ ಹಾಗೆಯೇ ಇದೆ. ಆದರೆ, ಈ ಪ್ರಕರಣದಲ್ಲಿ ನನ್ನ ಮಗನ ಜೊತೆಗೆ ನನ್ನನ್ನೂ ಎಳೆದುತಂದು ತೇಜೋವಧೆ ಮಾಡಲಾಗುತ್ತಿದೆ ಎಂದು ಸಮೀರ್ ವಾಂಖೆಡೆಯ ತಂದೆ ಆರೋಪಿಸಿದ್ದಾರೆ.

ನಾನು ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಹಾಗೇ, ರಾಜ್ಯ ಸರ್ಕಾರದ ಇಲಾಖೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದೇನೆ. ನನ್ನ ಹೆಸರು ಜ್ಞಾನದೇವ್ ಅಲ್ಲ ಮತ್ತು ದಾವೂದ್ ವಾಂಖೆಡೆ ಎಂದಾಗಿದ್ದರೆ ಇದುವರೆಗೂ ಯಾರೊಬ್ಬರಿಗಾದರೂ ಆ ವಿಷಯ ಗೊತ್ತಿರಬೇಕಿತ್ತಲ್ಲ. ಯಾರಿಗೂ ಗೊತ್ತಿಲ್ಲದ ವಿಷಯ ನವಾಬ್ ಮಲಿಕ್ ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ? ಮಲಿಕ್‌ಗೆ ಮಾತ್ರ ಅನುಮಾನಾಸ್ಪದ ದಾಖಲೆ ಸಿಕ್ಕಿದ್ದು ಹೇಗೆ? ಎಂದು ಜ್ಞಾನದೇವ್ ವಾಂಖೆಡೆ ಪ್ರಶ್ನಿಸಿದ್ದಾರೆ.

ಇನ್ನು, ವಾಂಖೆಡೆ ಅವರ ತಂದೆ ಹೇಳುವ ಪ್ರಕಾರ, ಆರು ವರ್ಷಗಳ ಹಿಂದೆ ನಿಧನರಾದ ನನ್ನ ಪತ್ನಿ ಒಮ್ಮೆ ಅಫಿಡವಿಟ್ ಮಾಡಿದ್ದು, ಅದರಲ್ಲಿ ನನ್ನ ಹೆಸರು ಜ್ಞಾನದೇವ್ ವಾಂಖೆಡೆ ಎಂದು ಉಲ್ಲೇಖಿಸಲಾಗಿದೆ. ನನ್ನ ಬಳಿ ಮಾನ್ಯವಾದ ಜಾತಿ ಪ್ರಮಾಣಪತ್ರವೂ ಇದೆ. ನಾನು ಮಾತ್ರವಲ್ಲ, ನನ್ನ ಸಂಬಂಧಿಕರ ಬಳಿಯೂ ಇದೇ ರೀತಿಯ ದಾಖಲೆಗಳಿವೆ ಎಂದಿದ್ದಾರೆ.

ಸಮೀರ್ ವಾಂಖೆಡೆ ಅವರು ಮಲಿಕ್ ಅವರ ನಕಲಿ ದಾಖಲೆಗಳ ಆರೋಪವನ್ನು ನಿರಾಕರಿಸಿದ ನಂತರ ಜ್ಞಾನದೇವ್ ವಾಂಖೆಡೆ ಕೂಡ ಈ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸಮೀರ್ ವಾಂಖಡೆ ಅವರ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಅವರು 2007ರಲ್ಲಿ ರಾಜ್ಯದ ಅಬಕಾರಿ ಇಲಾಖೆಯಲ್ಲಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾಗಿದ್ದರು. ಅವರ ತಂದೆ ಹಿಂದೂ ಮತ್ತು ಅವರ ಮೃತ ತಾಯಿ ಜಹೀದಾ ಮುಸ್ಲಿಂ ಆಗಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್​ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನದ ಬಳಿಕ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ವೈಯಕ್ತಿಕ ಟೀಕೆಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ಇಡೀ ಕುಟುಂಬ ಜೊತೆಗೆ ಮೃತಪಟ್ಟಿರುವ ನನ್ನ ತಾಯಿಯನ್ನೂ ಟಾರ್ಗೆಟ್ ಮಾಡಿ ಟೀಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಮೀರ್ ವಾಂಖೆಡೆ ಲಾಕ್ ಡೌನ್ ಸಂದರ್ಭದಲ್ಲಿ ಮಾಲ್ಡೀವ್ಸ್ ನಲ್ಲಿದ್ದರು ಮತ್ತು ಅವರು ಬಾಲಿವುಡ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.

ಈ ಕುರಿತು ಸಮೀರ್ ಪ್ರತಿಕ್ರಿಯೆ ನೀಡಿದ್ದು, ನನ್ನ ವೈಯಕ್ತಿಕ ದಾಖಲೆಗಳನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡುವ ಮೂಲಕ ನನ್ನ ಕುಟುಂಬದ ಖಾಸಗಿತನದಲ್ಲಿ ಮೂಗು ತೂರಿಸುವ ಕೆಲಸ ನಡೆಯುತ್ತಿದೆ. ನನ್ನ ಕುಟುಂಬ, ನನ್ನ ತಂದೆ, ಹಾಗೇ 6 ವರ್ಷದ ಹಿಂದೆ ಮೃತಪಟ್ಟಿರುವ ನನ್ನ ತಾಯಿಯನ್ನೂ ಈ ವಿಷಯದಲ್ಲಿ ಎಳೆಯುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಕುಟುಂಬಸ್ಥರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ

ಸಮೀರ್ ವಾಂಖೆಡೆ ವಾಟ್ಸಪ್ ಚಾಟ್ ಪರಿಶೀಲಿಸಿದರೆ ನಕಲಿ ಎನ್​ಸಿಬಿ ಕೇಸ್ ಪತ್ತೆಯಾಗುತ್ತದೆ: ನವಾಬ್ ಮಲ್ಲಿಕ್

Published On - 1:33 pm, Tue, 26 October 21