ಸುಳ್ಳಾಯ್ತು ಭವಿಷ್ಯ, ಕ್ಷಮೆ ಕೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ
ತೆಲುಗು ಚಿತ್ರರಂಗದ ನಟ-ನಟಿಯರ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಜ್ಯೋತಿಷಿ ವೇಣುಸ್ವಾಮಿ ತಾವು ಇನ್ನು ಮುಂದೆ ಸಿನಿಮಾದವರು ಹಾಗೂ ರಾಜಕಾರಣಿಗಳ ಭವಿಷ್ಯವನ್ನು ಹೇಳುವುದಿಲ್ಲ ಎಂದಿದ್ದಾರೆ.
ತೆಲುಗು ಚಿತ್ರರಂಗದವರ (Tollywood), ರಾಜಕಾರಣಿಗಳ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಕ್ಷಮೆ ಕೇಳಿದ್ದಾರೆ. ಇನ್ನುಮುಂದೆ ಸಿನಿಮಾ ನಟರ ಖಾಸಗಿ ವಿಷಯಗಳ ಬಗ್ಗೆ ಭವಿಷ್ಯ ನುಡಿಯುವುದಿಲ್ಲ ಎಂದು ಹೇಳಿದ್ದಾರೆ. ವೇಣು ಸ್ವಾಮಿ, ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್ರ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿದೆ. ಜಗನ್ರ ವೈಸಿಪಿ ಪಕ್ಷ ಹೀನಾಯ ಸೋಲು ಕಂಡಿದ್ದು ಟಿಡಿಪಿ ಪಕ್ಷ ಭಾರಿ ವಿಜಯ ದಾಖಲಿಸಿದೆ.
ವಿಡಿಯೋ ಮೂಲಕ ಮಾತನಾಡಿರುವ ವೇಣು ಸ್ವಾಮಿ, ‘ನರೇಂದ್ರ ಮೋದಿ ಪ್ರಭಾವ ಗತ್ತುತ್ತದೆ ಎಂದಿದ್ದೆ. ಜಗನ್ ಮತ್ತೆ ಗೆಲ್ಲುತ್ತಾರೆ ಎಂದಿದ್ದೆ. ನನಗೆ ಇರುವ ವಿದ್ವತ್, ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ಈ ಭವಿಷ್ಯವನ್ನು ನಾನು ನುಡಿದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಫ್ರಭಾವ ತಗ್ಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ನಾನು ಜಾತಕಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯ ಹೇಳಿದ್ದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.
‘ನಾನು ನಂಬುವ ವೆಂಕಟೇಶ್ವರ ಸ್ವಾಮಿ ಮತ್ತು ಕಾಮಾಕ್ಯ ದೇವಿಯ ಕ್ಷಮೆ ಕೇಳುತ್ತೇನೆ. ನಾನು ಹೇಳಿರುವುದು ಸುಳ್ಳಾಗಿದೆಯಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ಭವಿಷ್ಯ ಸುಳ್ಳಾಗಿದ್ದರಿಂದ ಜನ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ, ಅವರಿಗೆ ನಾನು ಏನೂ ಹೇಳುವುದಿಲ್ಲ. ನನ್ನನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡಲಾಗಿತ್ತು, ಈಗಂತೂ ಟ್ರೋಲಿಂಗ್ ಹೆಚ್ಚಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ
‘ನಾನು, ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ, ಇಂದಿನಿಂದ ರಾಜಕೀಯ ಹಾಗೂ ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯ ನುಡಿಯುವುದಿಲ್ಲ, ಜಾತಕ ವಿಶ್ಲೇಷದಿರುವ ನಿರ್ಧಾರ ತಳೆದಿದ್ದೇನೆ. ನಾನು ಈ ಬಾರಿ ಜಗನ್ ಹಾಗೂ ಚಂದ್ರಬಾಬು ನಾಯ್ಡು ಅವರ ಜಾತಕಗಳನ್ನು ವಿಶ್ಲೇಷಣೆ ಮಾಡುವುದರಲ್ಲಿ ಎಡವಿದ್ದೇನಾದ್ದರಿಂದ ಇನ್ನು ಮುಂದೆ ಯಾವುದೇ ರಾಜಕೀಯ ಅಥವಾ ಸಿನಿಮಾ ವ್ಯಕ್ತಿಗಳ ಭವಿಷ್ಯವನ್ನು ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಳ್ಳದಿರಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.
ವೇಣುಸ್ವಾಮಿ, ಟಾಲಿವುಡ್ನ ಹಲವು ಸ್ಟಾರ್ ನಟ-ನಟಿಯರ ಭವಿಷ್ಯ ಹೇಳಿದ್ದರು. ಸಮಂತಾ-ನಾಗಚೈತನ್ಯ ಬೇರೆಯಾಗುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು. ‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದರು. ಅದರ ಬಳಿಕ ಅವರು ಸ್ಟಾರ್ ನಟಿ ಆದರು. ಹಲವು ತೆಲುಗು ನಟಿ-ನಟರುಗಳು ವೇಣುಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ