ಫ್ಲಾಪ್​ನಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದ ಚಿರಂಜೀವಿ: ‘ಭೋಲಾ ಶಂಕರ್’ ಸಿನಿಮಾದ ನಷ್ಟವೆಷ್ಟು?

Bhola Shankar: ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಲಾ ಶಂಕರ್' ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೆಲ ಕಚ್ಚಿದೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಆದ ನಷ್ಟವೆಷ್ಟು?

ಫ್ಲಾಪ್​ನಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದ ಚಿರಂಜೀವಿ: 'ಭೋಲಾ ಶಂಕರ್' ಸಿನಿಮಾದ ನಷ್ಟವೆಷ್ಟು?
ಭೋಲಾ ಶಂಕರ್
Follow us
ಮಂಜುನಾಥ ಸಿ.
|

Updated on: Aug 16, 2023 | 11:21 PM

ಚಿರಂಜೀವಿಯ (Chiranjeevi) ವಾರಗೆಯ ನಟರಾದ ಕಮಲ್ ಹಾಸನ್, ರಜನೀಕಾಂತ್, ಮೋಹನ್​ಲಾಲ್, ಶಿವರಾಜ್ ಕುಮಾರ್ ಅವರುಗಳೆಲ್ಲ ಒಂದರ ಮೇಲೊಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದರೆ ಚಿರಂಜೀವಿ ಮಾತ್ರ ಒಂದಕ್ಕಿಂತಲೂ ಒಂದು ದೊಡ್ಡ ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅದೇ ಹಳೆಯ ರೀಮೇಕ್ ತಂತ್ರಕ್ಕೆ ಜೋತು ಬಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ. ಇದೀಗ ‘ಭೋಲಾ ಶಂಕರ್‘ (Bhola Shankar) ಸಿನಿಮಾ ಮೂಲಕ ಮತ್ತೊಂದು ದೊಡ್ಡ ಫ್ಲಾಪ್ ಸಿನಿಮಾ ನೀಡಿದ್ದಾರೆ.

ಕಳೆದ ವರ್ಷ ಬಿಡುಗಡೆ ಆಗಿದ್ದ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಚಿರಂಜೀವಿಯ ಈ ವರೆಗಿನ ಅತ್ಯಂತ ಹೀನಾಯ ಸೋಲು ಕಂಡು ಸಿನಿಮಾ ಎನ್ನಲಾಗಿತ್ತು. ಸಿನಿಮಾಕ್ಕೆ ಹಾಕಿದ್ದ ಅರ್ಧದಷ್ಟು ಬಂಡವಾಳವೂ ವಾಪಸ್ ಬಂದಿರಲಿಲ್ಲ. ಆದರೆ ಒಂದೇ ವರ್ಷದಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ ಚಿರಂಜೀವಿ ತಮ್ಮ ಹೊಸ ಸಿನಿಮಾ ‘ಭೋಲಾ ಶಂಕರ್’ ಸಿನಿಮಾ ಮೂಲಕ.

ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಿತ್ತು, ತಮಿಳಿನ ‘ವೇದಾಲಂ’ ಸಿನಿಮಾದ ರೀಮೇಕ್ ಆಗಿದ್ದ ಈ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ತಮನ್ನಾ ಹಾಗೂ ಕೀರ್ತಿ ಸುರೇಶ್ ನಟಿಸಿದ್ದರು. ಸಿನಿಮಾ ಇದೀಗ ಅಟ್ಟರ್ ಫ್ಲಾಪ್ ಎನಿಸಿಕೊಂಡಿದೆ. ಮೊದಲ ದಿನ ಸಾಧಾರಣ ಓಪನಿಂಗ್ ಕಂಡ ಸಿನಿಮಾ ಮಾರನೇಯ ದಿನದಿಂದಲೇ ಗಳಿಕೆಯಲ್ಲಿ ಇಳಿಮುಖ ನೋಡಲಾರಂಭಿಸಿತು. ಸಿನಿಮಾ ಬಿಡುಗಡೆ ಆರು ಬಳಿಕ ಮೊದಲ ದಿನದ ಕಲೆಕ್ಷನ್​ನ 90% ರಷ್ಟು ಕುಸಿದು ಹೋಗಿದೆ.

ಇದನ್ನೂ ಓದಿ:‘ಭೋಲಾ ಶಂಕರ್ ಒಂದು ದುರಂತ’; ಚಿರಂಜೀವಿಗೆ ಮತ್ತೊಂದು ಸೋಲು

100 ಕೋಟಿ ಬಜೆಟ್​ನ ‘ಭೋಲಾ ಶಂಕರ್’ ಐದು ದಿನದಲ್ಲಿ ಗಳಿಸಿದ್ದು ಕೇವಲ 23 ಕೋಟಿ. ಸಿನಿಮಾಕ್ಕೆ ಹೂಡಿರುವ ಬಂಡವಾಳದಲ್ಲಿ ಕಾಲು ಭಾಗದಷ್ಟು ಸಹ ವಾಪಸ್ ಬಂದಿಲ್ಲ. ಹಲವು ಚಿತ್ರಮಂದಿರಗಳಲ್ಲಿ ಈಗಾಗಲೇ ಸಿನಿಮಾ ಎತ್ತಂಗಡಿಯಾಗಿದೆ. ಈ ವಾರಾಂತ್ಯದ ಬಳಿಕ ಇನ್ನಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಜಾಗ ಖಾಲಿ ಮಾಡಲಿದೆ ಒಟ್ಟಾರೆ ‘ಭೋಲಾ ಶಂಕರ್’ ಸುಮಾರು 30ರಿಂದ 40 ಕೋಟಿ ಹಣ ಗಳಿಸಬಹುದಷ್ಟೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಅಲ್ಲಿಗೆ ಸಿನಿಮಾದಿಂದ ಒಟ್ಟು ಬಜೆಟ್​ನ 60% ಕ್ಕಿಂತಲೂ ಹೆಚ್ಚಿನ ನಷ್ಟವನ್ನು ಸಿನಿಮಾ ಅನುಭವಿಸಲಿದೆ.

ಈ ನಡುವೆ ‘ಭೋಲಾ ಶಂಕರ್’ ಸಿನಿಮಾದ ನಿರ್ಮಾಪಕ ಅನಿಲ್ ಸುರಕುರ ಅವರ ವಾಟ್ಸ್ ಆಪ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರಂಜೀವಿ ಬಹಳ ಒಳ್ಳೆಯ ವ್ಯಕ್ತಿ, ನಿರ್ಮಾಪಕರ ಪರ ಇರುವವರು ಅವರೊಟ್ಟಿಗೆ ಮತ್ತೊಂದು ಸಿನಿಮಾ ಮಾಡುತ್ತೇನೆ, ಈಗ ಮಾತನಾಡುತ್ತಿರುವವರು ಬಾಯಿ ಮುಚ್ಚಿಸುತ್ತೇನೆ ಎಂದು ಆಪ್ತರೊಬ್ಬರಿಗೆ ಅನಿಲ್ ಕಳಿಸಿರುವ ಸಂದೇಶ ವೈರಲ್ ಆಗಿದೆ. ಆ ಮೂಲಕ ಚಿರಂಜೀವಿ ಹಾಗೂ ಅನಿಲ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂಬುದು ಖಾತ್ರಿಯಾಗಿದೆ.

ಇನ್ನು ಚಿರಂಜೀವಿ ಅಭಿಮಾನಿಗಳಂತೂ ಮೆಚ್ಚಿನ ನಟನ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಚಿರಂಜೀವಿ ರೀಮೇಕ್ ಸಿನಿಮಾಗಳನ್ನು ಬಿಟ್ಟು ಸ್ವಮೇಕ್ ಸಿನಿಮಾಗಳನ್ನು ಮಾತ್ರವೇ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ