BIFFes 2023: 14ನೇ ಬೆಂಗಳೂರು ಸಿನಿಮೋತ್ಸವಕ್ಕೆ ಕ್ಷಣಗಣನೆ; ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ?
14th Bengaluru International Film Festival: ಬೆಂಗಳೂರು ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿ ‘ಕಾಂತಾರ’ ಸಿನಿಮಾ ಪ್ರದರ್ಶನ ಕಾಣಲಿದೆ. ಸಪ್ತಮಿ ಗೌಡ, ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಷ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ (14th Bengaluru International Film Festival) ಚಾಲನೆ ನೀಡಲು ಕ್ಷಣಗಣನೆ ಆರಂಭ ಆಗಿದೆ. ಇಂದು (ಮಾರ್ಚ್ 23) ಅದ್ದೂರಿಯಾಗಿ ಚಿತ್ರೋತ್ಸವ ಆರಂಭ ಆಗಲಿದೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಲು ಬೇರೆ ಬೇರೆ ರಾಜ್ಯ ಮತ್ತು ದೇಶಗಳಿಂದ ಸಿನಿಪ್ರಿಯರು ಆಗಮಿಸುತ್ತಾರೆ. ಚಿತ್ರರಂಗದ ದಿಗ್ಗಜರು ಮಾಸ್ಟರ್ ಕ್ಲಾಸ್ ನಡೆಸುತ್ತಾರೆ. ಈ ಬಾರಿ ಇನ್ನಷ್ಟು ವಿಶೇಷತೆಗಳೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ (BIFFES) ನಡೆಯಲಿದೆ. ಸಂಜೆ ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿವಿಧ ಭಾಷೆಯ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. 8 ದಿನಗಳ ಕಾಲ ನಡೆಯುವ ಸಿನಿಮೋತ್ಸವದಲ್ಲಿ ಹಲವು ದೇಶಗಳ ಮಹತ್ವದ ಸಿನಿಮಾಗಳು ಪ್ರದರ್ಶನ ಆಗಲಿವೆ.
ಉದ್ಘಾಟನಾ ಸಿನಿಮಾ ‘ಕಾಂತಾರ’:
2023ನೇ ಸಾಲಿನ ಬೆಂಗಳೂರು ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿ ‘ಕಾಂತಾರ’ ಸಿನಿಮಾ ಪ್ರದರ್ಶನ ಕಾಣಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಮ್ಯಾ ಕೃಷ್ಣ, ಸಪ್ತಮಿ ಗೌಡ, ರಮ್ಯಾ ದಿವ್ಯ ಸ್ಪಂದನಾ, ಅಭಿಷೇಕ್ ಅಂಬರೀಷ್, ವಿಜಯೇಂದ್ರ ಪ್ರಸಾದ್, ಗೋವಿಂದ್ ನಿಹಲಾನಿ ಮುಂತಾದವರು ಹಾಜರಿ ಹಾಕಲಿದ್ದಾರೆ.
ಇದನ್ನೂ ಓದಿ: ಬರ್ಲಿನ್ ಸಿನಿಮೋತ್ಸವದಲ್ಲಿ ಮಿಂಚಿದ ವಿಜಯ್ ವರ್ಮಾ
ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ನೋಡುವ ಅವಕಾಶ:
ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆದಿದೆ. ಅಕಾಡೆಮಿ ಪ್ರಶಸ್ತಿ ಪಡೆದ ಸಿನಿಮಾಗಳು ಕೂಡ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಆಗಲಿವೆ. 100ಕ್ಕೂ ಅಧಿಕ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.
ಸ್ಪರ್ಧಾ ವಿಭಾಗದಲ್ಲಿರುವ ಸಿನಿಮಾಗಳು ವಿವರ:
ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ ವಿಭಾಗದಲ್ಲಿ ಮಂಸೋರೆ ನಿರ್ದೇಶನದ ‘19.20.21’, ಪುನೀತ್ ರಾಜ್ಕುಮಾರ್ ಅವರ ‘ಗಂಧದ ಗುಡಿ’, ಶರಣ್ ನಟನೆಯ ‘ಗುರು ಶಿಷ್ಯರು’, ಪೃಥ್ವಿ ಕೋಣನೂರು ನಿರ್ದೇಶನದ ‘ಹದಿನೇಳೆಂಟು’, ‘ಕನಕಮಾರ್ಗ’, ‘ಕೋರಮ್ಮ’, ‘ಕುಬುಸ’, ‘ಮೇಡ್ ಇನ್ ಬೆಂಗಳೂರು’, ‘ನಾಳ್ಕೆ’, ‘ನಾನು ಕುಸುಮ’, ‘ಆರ್ಕೆಸ್ಟ್ರಾ ಮೈಸೂರು’, ‘ಫೋಟೊ’, ‘ಮಠ’, ‘ವಿಜಯಾನಂದ’ ಸಿನಿಮಾಗಳು ಪ್ರಶಸ್ತಿಗಾಗಿ ಪರಸ್ಪರ ಸೆಣೆಸಲಿವೆ.
ಇದನ್ನೂ ಓದಿ: ಬೆತ್ತಲಾಗಿ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದ ಯುವತಿ; ಮುಜುಗರ ತಂದ ಘಟನೆ
ಇನ್ನು ಭಾರತೀಯ ವಿಭಾಗದಲ್ಲಿ ಮುದುಗ ಭಾಷೆಯ ‘ಆದಿವಾಸಿ’, ಕನ್ನಡದ ‘ಆರಾರಿರಾರೋ’, ‘ಅನ್ನ’ ‘ತನುಜಾ’, ‘ಕೋಲಿ ಎಸ್ರು’, ‘ಮಾವು ಬೇವು’, ಬೆಂಗಾಲಿಯ ‘ಅಪಾರಿಜಿತೊ’, ಮೂಕಿ ಸಿನಿಮಾ ‘ದಿ ಗಾರ್ಡ್’, ತಮಿಳಿನ ‘ಗಾರ್ಗಿ’, ಕೊಡವ ಭಾಷೆಯ ‘ಕುಡಿಕಾಲಿ’, ಮಲಯಾಳಂನ ‘ಜನ ಗಣ ಮನ’ ‘ಪಲ್ಲೋಟಿ 90 ಕಿಡ್ಸ್’, ‘ಸೌದಿ ವೆಲ್ಲಕ್ಕ ಸಿಸಿನಂ 225/2009’, ಬೋಡೋ ಭಾಷೆಯ ‘ಸಿಫುಂಗ್’ ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Thu, 23 March 23








