ಕೊರೊನಾ ವೈರಸ್ ಎಂದರೆ ಎಂಥವರೂ ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಖ್ಯಾತಿ, ದುಡ್ಡು, ಪ್ರಭಾವ ಇರುವವರು ಕೂಡ ಈ ಮಹಾಮಾರಿಗೆ ಬಲಿಯಾಗುತ್ತಿರುವುದರಿಂದ ಸೆಲೆಬ್ರಿಟಿಗಳ ವಲಯದಲ್ಲಿ ಆತಂಕ ಮನೆ ಮಾಡಿದೆ. ಅನೇಕ ಸೆಲೆಬ್ರಿಟಿಗಳು ಕೊರೊನಾದಿಂದ ನಿಧನರಾಗಿದ್ದಾರೆ. ಹಲವರು ಕೊವಿಡ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಬಿಗ್ ಬಾಸ್ ಹಿಂದಿ ಸೀಸನ್ 14ರ ವಿನ್ನರ್ ರುಬೀನಾ ದಿಲೈಕ್ ಅವರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ಆದರೆ ಅವರು ಈಗ ಚೇತರಿಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕ್ವಾರಂಟೈನ್ ಆಗಿದ್ದ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ರುಬೀನಾ ತುಂಬಾ ಫೇಮಸ್. ಅದರಲ್ಲೂ ಅವರು ಬಿಗ್ ಬಾಸ್ ಹಿಂದಿ ಸೀಸನ್ 14ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಯಿತು. ಪತಿ ಅಭಿನವ್ ಶುಕ್ಲಾ ಜೊತೆ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಫಿನಾಲೆವರೆಗೂ ಸೆಣೆಸಾಡಿದ ಅವರು ಅಂತಿಮವಾಗಿ ಟ್ರೋಫಿ ಎತ್ತಿ ಹಿಡಿದಿದ್ದರು. ಮೇ 1ರಂದು ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿರುವುದು ಧೃಡಪಟ್ಟಿತ್ತು. ನಂತರ ಅವರು ಹೋಮ್ ಕ್ವಾರಂಟೈನ್ ಆಗಿದ್ದರು.
ಮನೆಯಲ್ಲೇ ಐಸೊಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಈಗ ಚೇತರಿಸಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘ಇದನ್ನು ನಾನು ತುಂಬ ದಿನಗಳಿಂದ ಹೇಳಬೇಕು ಎಂದುಕೊಂಡಿದ್ದೆ. ಇಂಥ ಕುಟುಂಬದ ಸದಸ್ಯರನ್ನು ಪಡೆದಿರುವುದಕ್ಕೆ ನಾನು ಅದೃಷ್ಟವಂತೆ ಎನಿಸುತ್ತದೆ. ಪ್ರೀತಿ ಮತ್ತು ಕಾಳಜಿ ತೋರಿಸುವ ಗಂಡ, ಸದಾ ಬೆಂಬಲವಾಗಿ ನಿಲ್ಲುವ ತಂದೆ-ತಾಯಿ ಮತ್ತು ಸಹೋದರಿಯರಿಗೆ ನಾನು ಋಣಿಯಾಗಿದ್ದೇನೆ. ಅಭಿಮಾನಿಗಳ ಹಾರೈಕೆಗಳನ್ನೂ ನಾನು ಓದಿದ್ದೇನೆ’ ಎಂದು ವಿಡಿಯೋದಲ್ಲಿ ಅವರು ಭಾವುಕವಾಗಿ ಮಾತನಾಡಿದ್ದಾರೆ.
‘ನಿಮ್ಮ ಪ್ರೀತಿ ನನಗೆ ಹೆಚ್ಚು ಶಕ್ತಿ ನೀಡುತ್ತದೆ. ಕೊರೊನಾದಿಂದ ಕಷ್ಟ ಅನುಭವಿಸುತ್ತಿರುವ ಎಲ್ಲರಿಗೂ ನಿಮ್ಮ ಪ್ರಾರ್ಥನೆ ಇರಲಿ. ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಿ. ನಾನು ಕೂಡ ಸಹಾಯ ಮಾಡಬೇಕು ಎಂದುಕೊಂಡಿದ್ದೇನೆ. ಎಲ್ಲರೂ ಸೇಫ್ ಆಗಿರಿ. ಈಗ ಕೆಲಸಕ್ಕಿಂತಲೂ ಆರೋಗ್ಯ ಮುಖ್ಯವಾಗಿದೆ’ ಎಂದು ರುಬೀನಾ ದಿಲೈಕ್ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ನಲ್ಲಿ ಇದ್ದಾಗ ರುಬೀನಾ ಅವರು ತಮ್ಮ ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದರು. ತಮ್ಮ ಪತಿಗೆ ಅವಮಾನ ಆಯಿತು ಎಂಬ ಕಾರಣಕ್ಕೆ ಅವರು ನಿರೂಪಕ ಸಲ್ಮಾನ್ ಖಾನ್ ವಿರುದ್ಧವೇ ಗುಡುಗಿದ್ದರು. ಕಡೆಗೂ ಅವರೇ ಬಿಗ್ ಬಾಸ್ ವಿನ್ನರ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ:
ಬಿಗ್ ಬಾಸ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಈ ಮೂವರಿಗೆ ಪ್ರವೇಶವಿಲ್ಲ; ಶೋ ಮುಗಿದರೂ ಗುಂಪುಗಾರಿಕೆ ನಿಂತಿಲ್ಲ ಯಾಕೆ?
ಬಿಗ್ ಬಾಸ್ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್ ಕಿಟ್ ನೀಡಿದ ನಟಿ