ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿರುವ ಡ್ರಗ್ ಕೇಸ್ನಲ್ಲಿ ಸಾಕಷ್ಟು ಜನರು ಬಂಧನಕ್ಕೆ ಒಳಗಾಗಿದ್ದಾರೆ. ಕೆಲ ಪ್ರಮುಖ ಹೀರೋ-ಹೀರೋಯಿನ್ಗಳನ್ನು ವಿಚಾರಣೆ ಮಾಡಲಾಗಿದೆ. ಈಗ ಹಿಂದಿ ಬಿಗ್ ಬಾಸ್ 7ನೇ ಸೀಸನ್ ಸ್ಪರ್ಧಿ ಅಜಾಝ್ ಖಾನ್ ಅವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿದೆ. ಅವರನ್ನು ವಿಚಾರಣೆ ಮಾಡಲಾಗುತ್ತಿದ್ದು, ಪ್ರಮುಖ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.
ಈ ಮೊದಲು ಎನ್ಸಿಬಿ ಶದಾಬ್ ಬತಾತಾ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಿತ್ತು. ಆತ ವಿಚಾರಣೆ ವೇಳೆ ಅಜಾಝ್ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ, ಮಂಗಳವಾರ (ಮಾರ್ಚ್ 30)ಮುಂಬೈನ ಅಂಧೇರಿ ಮತ್ತು ಲೋಖಂಡ್ವಾಲಾದಲ್ಲಿರುವ ಮನೆ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಜಾಝ್ ರಾಜಸ್ಥಾನದಲ್ಲಿದ್ದರು. ಅವರು, ಮುಂಬೈಗೆ ಬರುತ್ತಿದ್ದಂತೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಅಜಾಝ್ರನ್ನು ಬಂಧಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಆ ವೇಳೆ, ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.
ಇದಕ್ಕೂ ಮೊದಲು 2018ರಲ್ಲಿ ಡ್ರಗ್ ಕೇಸ್ ಒಂದರಲ್ಲಿ ಅಜಾಝ್ರನ್ನು ಅರೆಸ್ಟ್ ಮಾಡಲಾಗಿತ್ತು. ಬೇಲಾಪುರ್ನಲ್ಲಿರುವ ಹೋಟೆಲ್ ಒಂದರಲ್ಲಿ ಇವರು ಬಂಧನಕ್ಕೆ ಒಳಗಾಗಿದ್ದರು. ಅವರ ಬಳಿ 2.2 ಲಕ್ಷ ರೂಪಾಯಿ ಮೌಲ್ಯದ ಡ್ರಗ್ ಟ್ಯಾಬ್ಲೆಟ್ಗಳು ಇದ್ದವು ಎನ್ನಲಾಗಿದೆ.
ಸುಶಾಂತ್ ಸಿಂಗ್ ಸಾವಿನ ನಂತರ ಡ್ರಗ್ ಕೇಸ್ ವಿಚಾರ ಬೆಳಕಿಗೆ ಬಂದಿತ್ತು. ಸಾಕಷ್ಟು ಜನರು ಈ ಪ್ರಕರಣದಲ್ಲಿ ಬಂಧನಕ್ಕೆ ತುತ್ತಾಗಿದ್ದರು. ದೀಪಿಕಾ ಪಡುಕೋಣೆ ಸೇರಿದಂತೆ ಸಾಕಷ್ಟು ಕಲಾವಿದರು ವಿಚಾರಣೆಗೆ ಒಳಪಟ್ಟಿದ್ದರು. ಈಗ ಎನ್ಸಿಬಿ ಈ ಪ್ರಕಣದಲ್ಲಿ ಆಳಕ್ಕೆ ಹೋದಂತೆ ಹಲವು ಜನರು ಸಿಕ್ಕಿ ಬೀಳುತ್ತಿದ್ದಾರೆ.
Published On - 8:27 pm, Tue, 30 March 21