
ಅಶ್ವಿನಿ ಮತ್ತು ಗಿಲ್ಲಿ ಬಿಗ್ಬಾಸ್ (Bigg Boss) ಮನೆಯ ಟಾಮ್ ಆಂಡ್ ಜೆರ್ರಿ. ಬಿಗ್ಬಾಸ್ ಪ್ರಾರಂಭವಾದಾಗಿನಿಂದ ಇನ್ನೇನು ಮುಗಿಯುವ ಸಮಯ ಬಂದರೂ ಈ ಇಬ್ಬರ ವೈರತ್ವದಲ್ಲಿ ಬದಲಾವಣೆಯೇ ಆಗಿಲ್ಲ. ಮೊದಲ ವಾರದಂತೆಯೇ ಈಗಲೂ ಸಹ ಕಿತ್ತಾಡುತ್ತಾರೆ. ಆದರೆ ಈ ವಾರ ಗಿಲ್ಲಿ ನಟ ಮತ್ತು ಅಶ್ವಿನಿ ಅವರುಗಳು ಮನೆಯ ರಾಜ ಮತ್ತು ರಾಣಿ ಆಗಿದ್ದರು. ಇಬ್ಬರೂ ಒಟ್ಟಿಗೆ ಟಾಸ್ಕ್ನ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಹಲವು ಬಾರಿ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಜಗಳ ಆಡಿದರು, ಕಿತ್ತಾಡಿದರು. ಇದೀಗ ಪರಸ್ಪರ ಎದುರಾಳಿಗಳಾಗಿ ಆಟ ಆಡಬೇಕಾಗಿ ಬಂತು. ಆಟದಲ್ಲಿ ಅಶ್ವಿನಿ ಗೆದ್ದರೆ, ಗಿಲ್ಲಿ ಸೋತರು.
ವಾರವೆಲ್ಲ ಉಸ್ತುವಾರಿ ನಿಭಾಯಿಸಿದ ಅಶ್ವಿನಿ ಮತ್ತು ಗಿಲ್ಲಿ ಅವರಿಗೆ ಕ್ಯಾಪ್ಟನ್ ರೇಸಿಗೆ ಅವಕಾಶವನ್ನು ಬಿಗ್ಬಾಸ್ ಕೊಟ್ಟರು. ಅದಾಗಲೇ ರೇಸಿನಲ್ಲಿದ್ದ ರಾಶಿಕಾ ಮತ್ತು ಧನುಶ್ ಅವರಿಗೆ ಜೋಡಿ ಆಗಿ ಆಡುವ ಅವಕಾಶ ನೀಡಲಾಯ್ತು. ಅದರಂತೆ ಅಶ್ವಿನಿ ಮತ್ತು ಧನುಶ್ ಒಟ್ಟಿಗೆ ಮತ್ತು ರಾಶಿಕಾ ಮತ್ತು ಗಿಲ್ಲಿ ಒಟ್ಟಿಗೆ ಆಡಿದರು. ಈ ಆಟದಲ್ಲಿ ಧನುಶ್ ಮತ್ತು ಅಶ್ವಿನಿ ಒಳ್ಳೆಯ ಆಟವಾಡಿ ಗೆದ್ದರು. ಆಟ ಮುಗಿಯುವ ಮುನ್ನವೇ ಗಿಲ್ಲಿ, ಅಶ್ವಿನಿ ಬಗ್ಗೆ ಗೇಲಿ ಮಾಡಲು ಪ್ರಾರಂಭ ಮಾಡಿದ್ದರು. ಆದರೆ ಕೊನೆಯಲ್ಲಿ ಅಶ್ವಿನಿಯೇ ಆಟ ಗೆದ್ದು ಕ್ಯಾಪ್ಟೆನ್ಸಿ ರೇಸಿನ ಫೈನಲ್ಗೆ ಎಂಟ್ರಿ ಕೊಟ್ಟರು.
ಆದರೆ ಆಟ ಮುಗಿದ ಮೇಲೆ ಅಂದರೆ ಸೋತ ಮೇಲೆ ಗಿಲ್ಲಿ, ಪ್ರತಿ ಬಾರಿಯಂತೆ ಮಾತಿನ ಮೂಲಕ ಗೆದ್ದವರನ್ನು ಕುಗ್ಗಿಸುವ ಯತ್ನ ಮಾಡಲು ಆರಂಭಿಸಿದರು. ವಿಶೇಷವಾಗಿ ಅಶ್ವಿನಿ ಬಗ್ಗೆ ಮಾತನಾಡಿದ ಗಿಲ್ಲಿ, ‘ನಿಮಗೆ ಯಾರಾದರೂ ಒಬ್ಬರ ಸಹಾಯ ಇಲ್ಲದೆ ಏನನ್ನೂ ಮಾಡಲು ಆಗಲ್ಲ. ಈಗಲೂ ಸಹ ಇನ್ನೊಬ್ಬರ ಸಹಾಯದಿಂದ (ಧನುಶ್) ಕ್ಯಾಪ್ಟೆನ್ಸಿ ರೇಸಿಗೆ ಬಂದಿದ್ದೀರಿ’ ಎಂದು ಹೀಗಳೆಯಲು ಆರಂಭಿಸಿದರು. ಅಶ್ವಿನಿ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಕೊನೆಗೆ ಗಿಲ್ಲಿ, ‘ಇಷ್ಟು ದಿನ ಈ ಮನೆಯಲ್ಲಿ ಅಶ್ವಿನಿ ಅವರು ನನ್ನಿಂದ ಇಲ್ಲಿಯವರೆಗೆ ಬಂದರು, ಇನ್ನು ಮುಂದೆ ಧನುಶ್ ನೀನೇ ಇವರನ್ನು ಮುಂದೆ ಕರೆದುಕೊಂಡು ಹೋಗಬೇಕು. ನೀನೇ ಅಶ್ವಿನಿ ಅವರನ್ನು ಫಿನಾಲೆ ವರೆಗೆ ಕರೆದುಕೊಂಡು ಹೋಗಬೇಕು, ನನ್ನಿಂದ ಇನ್ನು ಮುಂದೆ ಆಗುವುದಿಲ್ಲ’ ಎಂದರು. ಇದೀಗ ಧನುಶ್ ಮತ್ತು ಅಶ್ವಿನಿ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಲಿದೆ. ಯಾರು ಗೆಲ್ಲಲಿದ್ದಾರೆಯೋ ಅವರು ಫಿನಾಲೆ ವಾರಕ್ಕೆ ನೇರವಾಗಿ ಎಂಟ್ರಿ ಕೊಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ