
‘ಬಿಗ್ ಬಾಸ್ ಕನ್ನಡ’ ವಿಜೇತ (Bigg Boss Kannada 12 Winner) ಗಿಲ್ಲಿ ನಟ ಅವರ ಬಗ್ಗೆಯೇ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಗೆದ್ದಿರುವ ಅವರು ಮಂಡ್ಯ, ಮದ್ದೂರು, ಮಳವಳ್ಳಿ ಮುಂತಾದೆಡೆ ಮೆರವಣಿಗೆಯಲ್ಲಿ ಭಾಗಿ ಆಗಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಗಿಲ್ಲಿ ನಟನನ್ನು ನೋಡಲು ಬಂದಿದ್ದಾರೆ. ಗಿಲ್ಲಿ ನಟ (Gilli Nata) ಅವರು ಸ್ವಗ್ರಾಮವಾದ ದಡದಪುರಕ್ಕೆ ಹೋಗಿದ್ದಾರೆ. ಆದರೆ ಸ್ವಂತ ಮನೆಗೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ! ಹಾಗಾಗಿ ಅವರು ಕೂಡಲೇ ವಾಪಸ್ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ದಾರೆ.
ಇಂದು (ಜನವರಿ 19) ಸಂಜೆ ವೇಳೆಗೆ ಗಿಲ್ಲಿ ನಟ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ತಲುಪಿದರು. ಸ್ವಗ್ರಾಮಕ್ಕೆ ಗಿಲ್ಲಿ ನಟರಾಜ್ ಬರುತ್ತಿದ್ದಂತೆಯೇ ಗ್ರಾಮಸ್ಥರಿಂದ ಸಂಭ್ರಮ ಜೋರಾಯಿತು. ದಡದಪುರ ಗ್ರಾಮದಲ್ಲಿ ಟ್ರೋಫಿ ಜೊತೆ ಗಿಲ್ಲಿ ನಟ ಮೆರವಣಿಗೆ ಮಾಡಿದರು. ಬಸವೇಶ್ವರ ದೇಗುಲದವರೆಗೆ ಗಿಲ್ಲಿ ನಟನ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮೂರಿನ ಹುಡುಗನಿಗೆ ಮಹಿಳೆಯರು ಆರತಿ ಬೆಳಗಿದರು.
ಗಿಲ್ಲಿ ಮನೆ ಬಳಿ ನೂರಾರು ಅಭಿಮಾನಿಗಳು ನೆರೆದಿದ್ದರು. ಮಗನ ಆಗಮನಕ್ಕಾಗಿ ಮನೆ ಮುಂದೆ ಸಗಣಿ ಸಾರಿಸಿ, ರಂಗೋಲಿ ಹಾಕಲಾಗಿತ್ತು. ಕೈಯಲ್ಲಿ ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡು ಬಂದಿದ್ದ ಅಭಿಮಾನಿಗಳು ಕೂಡ ಅಲ್ಲಿ ಜಮಾಯಿಸಿದ್ದರು. ಸ್ವಗ್ರಾಮದ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣದಿಂದ ಗಿಲ್ಲಿ ನಟ ಅವರು ಊರಿಗೆ ಬಂದರೂ ಮನೆಗೆ ಬಾರದೇ ವಾಪಸ್ ಬೆಂಗಳೂರಿಗೆ ತೆರಳುವಂತಾಯಿತು.
ಅದಕ್ಕೂ ಮುನ್ನ ಮಳವಳ್ಳಿಯ ಪ್ರಮುಖ ರಸ್ತೆಗಳಲ್ಲಿ ಗಿಲ್ಲಿಯ ಮೆರವಣಿಗೆ ನಡೆಯಿತು. ದಂಡಿನಮಾರಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಹೊರಟಿತು. ಬಿಗ್ಬಾಸ್ ರಿಯಾಲಿಟಿ ಶೋಗೆ ಹೋಗುವಾಗಲೂ ಗಿಲ್ಲಿ ನಟ ಅವರು ಇಲ್ಲಿ ಪೂಜೆ ಮಾಡಿಸಿದ್ದರು. ಆದ್ದರಿಂದ ಈಗ ಬಿಗ್ಬಾಸ್ ಟ್ರೋಫಿ ಜೊತೆ ಬಂದು ದಂಡಿನಮಾರಮ್ಮನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಮಳವಳ್ಳಿಯಲ್ಲಿ ಜನರ ನಿಯಂತ್ರಿಸಲು ಖಾಕಿ ಹರಸಾಹಸ
ಮದ್ದೂರು, ಕೆ.ಎಂ.ದೊಡ್ಡಿ ಸೇರಿ ಹಲವು ಊರುಗಳಲ್ಲಿ ತೆರೆದ ವಾಹನದಲ್ಲಿ ನೂರಾರು ಅಭಿಮಾನಿಗಳ ಜೊತೆ ಗಿಲ್ಲಿ ನಟ ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಸ್ಥಾನದಿಂದ ದಡದಪುರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ವೇಳೆ ಗಿಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.