‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ
ಬಿಗ್ ಬಾಸ್ ಕನ್ನಡ 12ರ ವಿಜೇತ ಗಿಲ್ಲಿ, ಅಶ್ವಿನಿ ಗೌಡ ಅವರ ಆರೋಪಗಳಿಗೆ ಸೌಜನ್ಯದಿಂದ ಉತ್ತರಿಸಿದ್ದಾರೆ. ಅಶ್ವಿನಿ ಗೌಡ ಮೊದಲು ಅಭಿನಂದಿಸಿ ನಂತರ ತಮ್ಮ ಮಾತು ಬದಲಾಯಿಸಿದ್ದಾರೆ. ಗಿಲ್ಲಿ ಗೆಲುವಿನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, "ಅಶ್ವಿನಿ ಗೌಡ ಹಾಗೆ ಹೇಳೋಕೆ ಸಾಧ್ಯವಿಲ್ಲ" ಎಂದಿದ್ದಾರೆ.

‘ಬಿಗ್ ಬಾಸ್ ಕನ್ನ ಸೀಸನ್ 12’ರ (BBK 12) ವಿನ್ನರ್ ಗಿಲ್ಲಿ ನಟ ಅವರು ಹುಟ್ಟೂರಲ್ಲಿ ರ್ಯಾಲಿ ನಡೆಸಿದ್ದಾರೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ತಮ್ಮಿಷ್ಟದ ಸ್ಪರ್ಧಿ, ಊರಿನ ಹುಡುಗ ಗೆದ್ದು ಬಂದಿದ್ದನ್ನು ನೋಡಿ ಊರಿನವರು ಖುಷಿಪಟ್ಟಿದ್ದಾರೆ. ಈಗ ಅಶ್ವಿನಿ ಗೌಡ ಅವರು ಗಿಲ್ಲಿ ಬಗ್ಗೆ ಕಿರಿಕ್ ತೆಗೆದಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕವೂ ಅವರು ಆರೋಪ ಮುಂದುವರಿಸಿದ್ದಾರೆ. ‘ಅಶ್ವಿನಿ ಗೌಡ ಹಾಗೆ ಹೇಳಲು ಸಾಧ್ಯವೇ ಇಲ್ಲ’ ಎಂಬುದು ಗಿಲ್ಲಿ ಮಾತು.
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮುಗಿಯುತ್ತಿದ್ದಂತೆ, ‘ಸರಿಯಾದ ವ್ಯಕ್ತಿಗೆ ಗೆಲುವು ಸಿಕ್ಕಿದೆ’ ಎಂದು ಹೇಳಿದ್ದರು. ಆದರೆ, ಮರುದಿನ ಅವರು ಮಾತು ಬದಲಾಯಿಸಿದ್ದಾರೆ. ಹೋದಲ್ಲಿ, ಬಂದಲ್ಲಿ ಗಿಲ್ಲಿ ಬಗ್ಗೆ ಮಾತನಾಡುತ್ತಿದ್ದಾರೆ. ‘ಬಡವರ ಮಕ್ಕಳು ಬೆಳೆಯಬೇಕು ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ. ಅದು ನಿಜಕ್ಕೂ ಸತ್ಯ. ಬಡವರ ಮಕ್ಕಳು ಬೆಳೆಯಬೇಕು. ಆದರೆ, ಬಡವರ ಮಕ್ಕಳ ರೀತಿ ನಾಟಕ ಆಡುವವರು ಗೆದ್ದರೆ? ಅದು ಸರಿ ಅಲ್ಲ ಎಂದು ನನಗೆ ಅನಿಸುತ್ತದೆ’ ಎಂದು ಗಿಲ್ಲಿ ವಿಜಯದ ಬಗ್ಗೆ ಅಪಸ್ವರ ತೆಗೆದಿದ್ದಾರೆ.
ಈ ಬಗ್ಗೆ ಗಿಲ್ಲಿಗೆ ಪ್ರಶ್ನೆ ಮಾಡಲಾಗಿದೆ. ‘ಅಶ್ವಿನಿ ಗೌಡ ಅವರು ನಿಮ್ಮ ಬಗ್ಗೆ ಹೀಗೆಲ್ಲ ಹೇಳಿದ್ದಾರೆ. ಇದಕ್ಕೆ ಏನಂತೀರಾ’ ಎಂದು ಕೇಳಲಾಗಿದೆ. ಆಗ ಗಿಲ್ಲಿ ಅವರು, ‘ನಾವು ತೀರಾ ಬಡವರು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅಶ್ವಿನಿ ಅವರು ಹೊರಗೆ ಬಂದಮೇಲೆ ಹೀಗೆ ಮಾತನಾಡಿದ್ರಾ? ಅವರು ಸಾಮಾನ್ಯವಾಗಿ ಹೀಗೆಲ್ಲ ಹೇಳಲ್ಲ’ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ಮುಗಿದರೂ ಗಿಲ್ಲಿನ ಕೆಣಕಿದ ಅಶ್ವಿನಿ ಗೌಡ; ಖಡಕ್ ತಿರುಗೇಟು ಕೊಟ್ಟ ಪಳಾರ್
ಗಿಲ್ಲಿ ಅವರ ಈ ಗುಣ ಅನೇಕರಿಗೆ ಇಷ್ಟ ಆಗಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬುದು ಗಿಲ್ಲಿಯ ತತ್ವ. ಹೊರಗೆ ಬಂದ ಬಳಿಕವೂ ಅದನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬುದು ವಿಶೇಷ. ಗಿಲ್ಲಿ ಅವರು ತಮಗೆ ಸಿಕ್ಕ ಜನಪ್ರಿಯತೆ ನೋಡಿ ಶಾಕ್ ಆಗಿದ್ದಾರೆ. ಅವರಿಗೆ ಖುಷಿ ಹಾಗೂ ಅಚ್ಚರಿ ಎರಡೂ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Tue, 20 January 26




