
ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಗ್ರ್ಯಾಂಡ್ ಓಪನಿಂಗ್ನ ಶೂಟಿಂಗ್ ಜಾಲಿವುಡ್ ಸ್ಟುಡಿಯೋನಲ್ಲಿ ಚಾಲ್ತಿಯಲ್ಲಿದೆ. ಹಲವಾರು ಸ್ಪರ್ಧಿಗಳು ಈಗಾಗಲೇ ಬಿಗ್ಬಾಸ್ ಮನೆಗೆ ಸೇರಿದ್ದಾರೆ. ಕಲರ್ಸ್ ವಾಹಿನಿ ಈಗಾಗಲೇ ಗ್ರ್ಯಾಂಡ್ ಓಪನಿಂಗ್ನ ಕೆಲ ಪ್ರೋಮೊ ವಿಡಿಯೋಗಳನ್ನು ಹಂಚಿಕೊಂಡಿದೆ. ಈ ಹಿಂದೆ ಹಂಚಿಕೊಂಡಿದ್ದ ಪ್ರೋಮೊನಲ್ಲಿ ನಟಿ ಸಂಗೀತಾ ಭಟ್ ಮತ್ತು ನಟಿ ಕಾವ್ಯಾ ಗೌಡ ಅವರುಗಳು ಬಿಗ್ಬಾಸ್ ಮನೆಗೆ ಹೋಗಿದ್ದು, ಅದರ ವಿಡಿಯೋ ಅನ್ನು ಹಂಚಿಕೊಂಡಿದ್ದರು. ಇದೀಗ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಆ ವಿಡಿಯೋ ಅನ್ನು ಸಹ ಕಲರ್ಸ್ ಹಂಚಿಕೊಂಡಿದೆ.
ಕನ್ನಡ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಇದು ಅವರ ಎರಡನೇ ಎಂಟ್ರಿ. ಹೌದು, ಓಂ ಪ್ರಕಾಶ್ ರಾವ್ ಅವರಿಗೆ ಇದು ಎರಡನೇ ಎಂಟ್ರಿ ಆಗಿದೆ. ಈ ಹಿಂದೆ ಬಿಗ್ಬಾಸ್ ಕನ್ನಡ ಸೀಸನ್ 4ರಲ್ಲಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಅವರಿಗೆ ವಿಪರೀತ ಕಾಲು ನೋವು ಶುರುವಾದ ಕಾರಣ, ಆರೋಗ್ಯದ ಕಾರಣ ನೀಡಿ ಅಲ್ಲಿಂದ ಹೊರಬಂದರು. ಇದೀಗ ಎರಡನೇ ಬಾರಿ ಓಂ ಪ್ರಕಾಶ್ ಅವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಓಂ ಪ್ರಕಾಶ್ ರಾವ್ ಅವರು ಇತ್ತೀಚೆಗೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ವಾಟ್ಲೆ ಕಿಚನ್ನಲ್ಲೂ ಅವರು ಕಾಣಿಸಿಕೊಂಡಿದ್ದರು. ಈಗ ಬಿಗ್ಬಾಸ್ಗೂ ಬಂದಿದ್ದಾರೆ. ಓಂ ಪ್ರಕಾಶ್ ರಾವ್ ಅವರನ್ನು ಸ್ವಾಗತಿಸಿದ ಸುದೀಪ್ ಅವರು, ಓಂ ಪ್ರಕಾಶ್ ರಾವ್ ಅವರಿಗೆ ಅವರದ್ದೇ ವಿಡಿಯೋ ಒಂದನ್ನು ಹಾಕಿ ತೋರಿಸಿದರು. ಓಂ ಪ್ರಕಾಶ್ ಅವರು ಟೆನ್ಷನ್ ಇಂದಾಗಿ ತಲೆ ಕೆರೆದುಕೊಳ್ಳುವ ವಿಡಿಯೋ ಅದಾಗಿತ್ತು. ‘ಹಾಗೆ ತಲೆ ಕೆರೆದು ಕೊಂಡರೆ ನನಗೆ ಸಮಾಧಾನ ಎನಿಸುತ್ತದೆ’ ಎಂದರು ಓಂ ಪ್ರಕಾಶ್ ರಾವ್.
ಇದನ್ನೂ ಓದಿ:Sangeetha Bhat Profile: ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದ ಸಂಗೀತಾ ಈಗ ಬಿಗ್ಬಾಸ್ ಮನೆಗೆ
‘ನೀವು ಬಿಗ್ಬಾಸ್ನಲ್ಲಿ ಇರುವಷ್ಟು ದಿನ ಎಷ್ಟು ಬಾರಿ ಬೀಪ್ ಹಾಕಬೇಕಾಗುತ್ತದೆಯೋ?’ ಎಂದರು ಸುದೀಪ್, ಅದಕ್ಕೆ ಓಂ ಪ್ರಕಾಶ್ ರಾವ್, ‘ವಾಹಿನಿಯವರು ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳಿಗೆ ಬೀಪ್ ಹಾಕದೆ, ಕೇಳಲು ಚೆನ್ನಾಗಿದೆ ಎಂದು ರಾಜ್ಯದ ಜನರು ಕೇಳಲು ಬಿಟ್ಟರೆ ಅನುಕೂಲ ಆಗುತ್ತದೆ’ ಎಂದರು. ಓಂ ಪ್ರಕಾಶ್ ಅವರ ಮಾತಿಗೆ ಸುದೀಪ್ ನಕ್ಕುಬಿಟ್ಟರು.
ಓಂ ಪ್ರಕಾಶ್ ರಾವ್, ಕನ್ನಡದ ಜನಪ್ರಿಯ ಸಿನಿಮಾ ನಿರ್ದೇಶಕರು. ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟ-ನಟಿಯರೊಟ್ಟಿಗೆ ಕೆಲಸ ಮಾಡಿದ್ದಾರೆ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ವರ್ಷಗಳಿಂದ ನೋಡಿದ್ದು, ಅನುಭವಿಗಳೂ ಸಹ ಆಗಿದ್ದಾರೆ. ಸಿನಿಮಾ ರಂಗದ ಬಗ್ಗೆ ಸಾಕಷ್ಟು ಕಂಟೆಂಟ್ ಅನ್ನು ಅವರು ನೀಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Sun, 6 September 26