ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ನಡೆದ ಆಟವೇ ಬೇರೆ, ಇನ್ಮುಂದೆ ನಡೆಯುವ ಆಟವೇ ಬೇರೆ. ಯಾಕೆಂದರೆ, ವೈಲ್ಡ್ ಕಾರ್ಡ್ ಮೂಲಕ ಹೊಸ ಹೊಸ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ನೀಡಿದ ಬಳಿಕ ಅಲ್ಲಿನ ವಾತಾವರಣ ಕೊಂಚ ಗಂಭೀರವಾಗುತ್ತಿದೆ. ಈಗ ಮೂವರು ಹೊಸ ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಚಂದ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಅಡಿಗ ಅವರ ಆಗಮನದಿಂದಾಗಿ ಇನ್ನುಳಿದ ಸ್ಪರ್ಧಿಗಳಿಗೆ ಟೆನ್ಷನ್ ಶುರುವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಸ್ಪರ್ಧೆ ನೀಡುತ್ತ ಬಂದಿದ್ದವರು ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎದುರಿನಲ್ಲಿ ಸೆಣೆಸಾಡಬೇಕಿದೆ. ತಮ್ಮ ಇಮೇಜ್ ಉಳಿಸಿಕೊಳ್ಳಲು ಕಷ್ಟಪಡಬೇಕಿದೆ. ಎಲ್ಲರ ಮೇಲೂ ಈ ಭಾರ ಇದೆ. ಪರಿಸ್ಥಿತಿ ಹೀಗಿರುವಾಗ ನಟಿ ಪ್ರಿಯಾಂಕಾ ತಿಮ್ಮೇಶ್ ಹೇಳಿದ ಒಂದು ಮಾತಿನಿಂದಾಗಿ ಶಮಂತ್ ಎಲ್ಲರ ಕಣ್ಣಲ್ಲಿ ಕಡೆಗಣಿಸಲ್ಪಡುವ ಸ್ಥಿತಿ ಬಂದಿದೆ!
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ ಪ್ರಿಯಾಂಕಾ ಅವರು ಮನೆಯೊಳಗಿರುವ ಎಲ್ಲರ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ನೋಡಲು ಪ್ರಶಾಂತ್ ಸಂಬರಗಿ ಒಂದು ಪ್ರಶ್ನೆ ಕೇಳಿದರು. ಇಲ್ಲಿರುವ ಎಲ್ಲರ ವೃತ್ತಿ ಏನು ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರಿಸಬೇಕಿತ್ತು. ಆಗ ಮೊದಲು ಬಂದ ಹೆಸರು ಶಮಂತ್ ಅವರದ್ದು. ‘ಇವರು ಏನೂ ಮಾಡುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸುಮ್ಮನೆ ಕೂತಿದ್ದಾರೆ ಅಷ್ಟೇ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು!
ಪ್ರಿಯಾಂಕಾ ಕಡೆಯಿಂದ ಈ ಮಾತು ಬರುತ್ತದೆ ಎಂದು ಶಮಂತ್ ಊಹಿಸಿಯೇ ಇರಲಿಲ್ಲ. ಈ ಮಾತಿನಿಂದಾಗಿ ಶಮಂತ್ ಸಂಪೂರ್ಣ ಸೈಲೆಂಟ್ ಆಗಿ ಬಿಟ್ಟರು. ತಮ್ಮನ್ನು ಇಷ್ಟೆಲ್ಲ ಹಗುರಾಗಿ ಕಾಣುತ್ತಿರುವುದು ಗೊತ್ತಾಗಿ ಅವರಿಗೆ ಖಂಡಿತಾ ಬೇಜಾರಾಗಿದೆ. ಮೊದಲ ಎರಡು ವಾರ ಕ್ಯಾಪ್ಟನ್ ಆದ ಅವಧಿಯನ್ನು ಹೊರತುಪಡಿಸಿದರೆ ಬೇರೆ ಎಲ್ಲ ವಾರಗಳಲ್ಲೂ ಶಮಂತ್ ಪರ್ಫಾಮೆನ್ಸ್ ಬಗ್ಗೆ ಎಲ್ಲ ಸ್ಪರ್ಧಿಗಳು ಆಕ್ಷೇಪ ಎತ್ತುತ್ತಿದ್ದರು. ಒಂದು ವಾರ ಕಳಪೆ ಹಣೆಪಟ್ಟಿಯಿಂದ ಅವರು ಜೈಲಿಗೂ ಹೋಗಬೇಕಾಯಿತು. ಪ್ರತಿ ವಾರವೂ ಶಮಂತ್ ನಾಮಿನೇಟ್ ಆಗುತ್ತಿದ್ದಾರೆ. ಅದರ ನಡುವೆ ಪ್ರಿಯಾಂಕಾ ಈ ರೀತಿ ಹೇಳಿರುವುದರಿಂದ ಅವರ ಇಮೇಜ್ಗೆ ಪೆಟ್ಟು ಬಿದ್ದಂತಾಗಿದೆ.
ಇದನ್ನೂ ಓದಿ: ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್ ನೇರ ಪ್ರಶ್ನೆಗೆ ಶಮಂತ್ ತಬ್ಬಿಬ್ಬು
Published On - 4:34 pm, Fri, 9 April 21