Bigg Boss: ಕೊವಿಡ್ ಪೂರ್ಣಗೊಂಡ ನಂತರ ಮುಂದುವರಿಯಲಿದೆ ಬಿಗ್ ಬಾಸ್; ವಾಹಿನಿಯಿಂದಲೇ ಅಧಿಕೃತ ಮಾಹಿತಿ
‘ಬಿಗ್ ಬಾಸ್’ ಮನೆಯಲ್ಲಿರುವ 6 ತಂತ್ರಜ್ಞರಿಗೆ ಕೊವಿಡ್ ಪಾಸಿಟಿವ್ ಆಗಿತ್ತು ಎನ್ನಲಾಗಿದೆ. ಅಲ್ಲದೆ, ಲಾಕ್ಡೌನ್ ಮಧ್ಯೆಯೂ ರಾಜಾರೋಷವಾಗಿ ಶೂಟಿಂಗ್ ಮಾಡಲಾಗುತ್ತಿತ್ತು. ಹೀಗಾಗಿ, ಅಧಿಕಾರಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿ ಶೋ ಅರ್ಧಕ್ಕೆ ನಿಲ್ಲಿಸಿದ್ದರು.

ಕೊವಿಡ್ ಕಾರಣಕ್ಕೆ ಕನ್ನಡ ‘ಬಿಗ್ ಬಾಸ್ ಸೀಸನ್-8’ 71 ದಿನಕ್ಕೆ ನಿಂತರೆ, ಮಲಯಾಳಂ ‘ಬಿಗ್ ಬಾಸ್ ಸೀಸನ್-3’ 95ನೇ ದಿನಕ್ಕೆ ಅಂತ್ಯವಾಗಿದೆ. ಈಗ ಕೇಳಿಬರುತ್ತಿರುವ ಲೇಟೆಸ್ಟ್ ಮಾಹಿತಿ ಏನೆಂದರೆ ಮಲಯಾಳಂ ‘ಬಿಗ್ ಬಾಸ್ ಸೀಸನ್-3’ ಮತ್ತೆ ಆರಂಭಗೊಳ್ಳಲಿದೆಯಂತೆ. ಈ ಬಗ್ಗೆ ವಾಹಿನಿಯೇ ಅಧಿಕೃತ ಮಾಹಿತಿ ನೀಡಿದೆ.
ಮಲಯಾಳಂ ‘ಬಿಗ್ ಬಾಸ್’ ಮನೆಯಲ್ಲಿರುವ 6 ತಂತ್ರಜ್ಞರಿಗೆ ಕೊವಿಡ್ ಪಾಸಿಟಿವ್ ಆಗಿತ್ತು ಎನ್ನಲಾಗಿದೆ. ಅಲ್ಲದೆ, ಲಾಕ್ಡೌನ್ ಮಧ್ಯೆಯೂ ರಾಜಾರೋಷವಾಗಿ ಶೂಟಿಂಗ್ ಮಾಡಲಾಗುತ್ತಿತ್ತು. ಹೀಗಾಗಿ, ಅಧಿಕಾರಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿ ಶೋ ಅರ್ಧಕ್ಕೆ ನಿಲ್ಲಿಸಿದ್ದರು. ಮನೆ ಸೀಜ್ ಕೂಡ ಮಾಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.
ಮಲಯಾಳಂ ಬಿಗ್ ಬಾಸ್ 95ನೇ ದಿನಕ್ಕೆ ನಿಂತಿತ್ತು. ಇನ್ನು, ಕೇವಲ 5 ದಿನ ನಡೆದಿದ್ದರೆ ಶೋ ಪೂರ್ಣಗೊಳ್ಳುತ್ತಿತ್ತು. ಆದರೆ, ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲೇ ಇಲ್ಲ. ಈ ಶೋ ಅರ್ಧಕ್ಕೆ ನಿಂತಿರುವುದಕ್ಕೆ ಮಲಯಾಳಂ ಕಿರುತೆರೆ ವೀಕ್ಷಕರು ತುಂಬಾನೇ ಬೇಸರಗೊಂಡಿದ್ದರು. ಈಗ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಮಲಯಾಳಂನಲ್ಲಿ ಬಿಗ್ ಬಾಸ್ ಪ್ರಸಾರ ಮಾಡುತ್ತಿರುವ ವಾಹಿನಿಯವರು ಈ ಬಗ್ಗೆ ಅಧಿಕೃತ ಪ್ರೆಸ್ನೋಟ್ ರಿಲೀಸ್ ಮಾಡಿದ್ದಾರೆ. ಕೊವಿಡ್-19 ಕಾರಣದಿಂದ ಬಿಗ್ ಬಾಸ್ ನಿಲ್ಲಿಸಲಾಗಿದೆ. ಕೊವಿಡ್ ಸಾಂಕ್ರಾಮಿಕ ಮುಗಿದ ಮೇಲೆ ಮತ್ತೆ ಶೋ ಆರಂಭಿಸುತ್ತೇವೆ ಎಂದು ವಾಹಿನಿ ಹೇಳಿದೆ. ಮತ್ತೆ ಬಿಗ್ ಬಾಸ್ ಸೀಸನ್-3 ಆರಂಭವಾದರೆ ಸುಮಾರು ಎರಡು ವಾರಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ.
ತಮಿಳುನಾಡಿನಲ್ಲಿ ಮಲಯಾಳಂ ಬಿಗ್ ಬಾಸ್ ಶೂಟಿಂಗ್ ನಡೆಸಲಾಗುತ್ತಿತ್ತು. ತಮಿಳುನಾಡಿನಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಅಲ್ಲಿನ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್ ಸೇರಿ ಸಾಕಷ್ಟು ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿದೆ. ಆದಾಗ್ಯೂ, ಮಲಯಾಳಂ ಬಿಗ್ ಬಾಸ್ ಸೀಸನ್ 3 ಶೂಟಿಂಗ್ ನಡೆಸಲಾಗುತ್ತಿತ್ತು. ಹೀಗಾಗಿ, ಅಧಿಕಾರಿಗಳು ಬಿಗ್ ಬಾಸ್ ಮನೆಗೆ ತೆರಳಿ ಅದನ್ನು ಸೀಜ್ ಮಾಡಿದ್ದರು.
ಇನ್ನು, ಕನ್ನಡ ಬಿಗ್ ಬಾಸ್ ಸೀಸನ್-8 ಕೂಡ ಅರ್ಧಕ್ಕೆ ನಿಂತಿದೆ. ಇದು ಕೂಡ ಮತ್ತೆ ಮುಂದುವರಿಯಲಿದೆಯೇ ಎಂಬ ಕುತೂಹಲ ವೀಕ್ಷಕರದ್ದು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್ ಬಾಸ್; ಯಾರವರು?