ತೆಲಂಗಾಣ ಸಿಎಂ ರೇವಂತ್ ರೆಡ್ಡಿಯ ಭೇಟಿ ಮಾಡಿದ ಅಜಯ್ ದೇವಗನ್, ಮಹತ್ವದ ಮಾತುಕತೆ

Ajay Devgn: ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಸಿನಿಮಾ ಸ್ಟುಡಿಯೋ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇದೀಗ ಹೊಸ ಉದ್ಯಮವೊಂದಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯ ಮಂತ್ರಿ ರೇವಂತ್ ರೆಡ್ಡಿ ಹಾಗೂ ಕೆಲ ಸಚಿವರುಗಳನ್ನು ಅವರು ಭೇಟಿ ಮಾಡಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿಯ ಭೇಟಿ ಮಾಡಿದ ಅಜಯ್ ದೇವಗನ್, ಮಹತ್ವದ ಮಾತುಕತೆ
Ajay Devgn

Updated on: Jul 08, 2025 | 11:13 AM

ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ (Ajay Devgn) ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ನವದೆಹಲಿಯಲ್ಲಿ ಭೇಟಿ ಆಗಿದ್ದಾರೆ. ಅಜಯ್ ದೇವಗನ್ ಅವರು ಮಹತ್ವದ ಚರ್ಚೆಯೊಂದನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆಗೆ ಮಾಡಿದ್ದು, ರೇವಂತ್ ರೆಡ್ಡಿ ಸಹ ದೇವಗನ್ ಅವರ ಹೂಡಿಕೆ ಉತ್ಸಾಹಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ ನಟ ಜೊತೆಗೆ ಉದ್ಯಮಿಯೂ ಆಗಿರುವ ಅಜಯ್ ದೇವಗನ್ ಅವರು ತೆಲಂಗಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಇದೇ ವಿಷಯವನ್ನು ರೇವಂತ್ ರೆಡ್ಡಿ ಜೊತೆಗೆ ಚರ್ಚೆ ನಡೆಸಿದ್ದಾರೆ.

ಅಜಯ್ ದೇವಗನ್ ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಕನ್​ಸ್ಟ್ರಕ್ಷನ್ ಬ್ಯುಸಿನೆಸ್, ಸ್ಟುಡಿಯೋ ಬ್ಯುಸಿನೆಸ್​ಗಳನ್ನು ಮುಂಬೈ, ಪುಣೆಗಳಲ್ಲಿ ಹೊಂದಿದ್ದಾರೆ. ಇದೀಗ ತಮ್ಮ ಉದ್ಯಮವನ್ನು ತೆಲಂಗಾಣ ರಾಜ್ಯಕ್ಕೂ ವಿಸ್ತರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.

ಸಿಎಂ ರೇವಂತ್ ರೆಡ್ಡಿ ಅವರು ತೆಲಂಗಾಣದಲ್ಲಿ ಮಲ್ಟಿಮೀಡಿಯಾ ಮತ್ತು ಸಿನಿಮಾಗಳಿಗೆ ಹೆಚ್ಚಿನ ಮೂಲ ಸಂಪನ್ಮೂಲವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಈ ಬಗ್ಗೆ ಕೆಲ ವಾರಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು. ತೆಲಂಗಾಣದ ಹೈದರಾಬಾದ್ ಅನ್ನು ವಿಶ್ವದ ಅತ್ಯುತ್ತಮ ಸಿನಿಮಾ ನಿರ್ಮಾಣ ಹಬ್ ಆಗಿ ರೂಪುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದರು. ತೆಲಂಗಾಣ ಸರ್ಕಾರ ಸಿನಿಮಾ ರಂಗಕ್ಕೆ ನೀಡುತ್ತಿರುವ ಬೆಂಬಲವನ್ನು ಗಮನಿಸಿ, ಅಜಯ್ ದೇವಗನ್ ಅವರು ತೆಲಂಗಾಣದಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್

ಅಜಯ್ ದೇವಗನ್, ವಿಶ್ವದರ್ಜೆಯ ಸ್ಟುಡಿಯೋ ಅನ್ನು ತೆಲಂಗಾಣದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿಎಫ್​ಎಕ್ಸ್, ಅನಿಮೇಷನ್, ಡಬ್ಬಿಂಗ್ ಸ್ಟುಡಿಯೋ, ಗ್ರೀನ್ ಮ್ಯಾಟ್ ಸ್ಟುಡಿಯೋ, ಎಡಿಟಿಂಗ್ ಫೆಸಿಲಿಟಿ, ರೀರೆಕಾರ್ಡಿಂಗ್ ಫೆಸಿಲಿಟಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮತ್ತು ಅನಿಮೇಷನ್, ವಿಎಫ್​ಎಕ್ಸ್​ಗೆ ಬೇಕಾದ ಎಲ್ಲ ತಂತ್ರಜ್ಞಾನವನ್ನು ಒಳಗೊಂಡ ಸ್ಟುಡಿಯೋ ಅನ್ನು ಅಜಯ್ ದೇವಗನ್ ನಿರ್ಮಾಣ ಮಾಡಲಿದ್ದಾರೆ. ಸುಮಾರು ನೂರು ಕೋಟಿಗೂ ಹೆಚ್ಚು ಹಣವನ್ನು ಅಜಯ್ ದೇವಗನ್ ಸ್ಟುಡಿಯೋ ನಿರ್ಮಾಣಕ್ಕೆ ಹೂಡಿಕೆ ಮಾಡಲಿದ್ದಾರೆ.

ತೆಲಂಗಾಣದ ಹೈದರಾಬಾದ್ ಈಗಾಗಲೇ ಸಿನಿಮಾ ನಿರ್ಮಾಣದ ಹಲವಾರು ಸವಲತ್ತುಗಳನ್ನು ಒಳಗೊಂಡಿದೆ. ದೇಶದಲ್ಲಿಯೇ ಪ್ರಸಿದ್ಧವಾಗಿರುವ ರಾಮೋಜಿರಾವ್ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್ ಇನ್ನೂ ಹಲವಾರು ಸ್ಟುಡಿಯೋ ಮತ್ತು ಫಿಲಂ ಸಿಟಿಗಳು ಹೈದರಾಬಾದ್​​ನಲ್ಲಿವೆ. ಸರ್ಕಾರ ಇನ್ನಷ್ಟು ಹೂಡಿಕೆಯನ್ನು ಸಿನಿಮಾ ಕ್ಷೇತ್ರದಲ್ಲಿ ಆಹ್ವಾನಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Tue, 8 July 25