ಬಾಲಿವುಡ್ ಹಿರಿಯ ನಟ, ರಾಮಾಯಣ ಧಾರಾವಾಹಿಯಲ್ಲಿ ಸುಮಂತನ ಪಾತ್ರದ ಮೂಲಕ ಜನಮನ ಗೆದ್ದಿದ್ದ ಚಂದ್ರಶೇಖರ್ ಇನ್ನಿಲ್ಲ
ಚಂದ್ರಶೇಖರ್ ಸುಮಾರು 250 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಸಿನಿಮಾ ಸುರಂಗ್ 1953ರಲ್ಲಿ ಬಿಡುಗಡೆಯಾಗಿದೆ. ಗೇಟ್ವೇ ಆಫ್ ಇಂಡಿಯಾ, ಫ್ಯಾಶನ್, ಬರ್ಸತ್ ಕಿ ರಾತ್ ಮತ್ತಿತರ ಪ್ರಮುಖ ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು.
1987ರಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ದಶರಥ ಮಹಾರಾಜನ ಮಂತ್ರಿ ಸುಮಂತನ ಪಾತ್ರ ನಿರ್ವಹಿಸಿ, ಖ್ಯಾತರಾಗಿದ್ದ ಬಾಲಿವುಡ್ ನಟ ಚಂದ್ರಶೇಖರ್ ಇಂದು ನಿಧನರಾದರು. ಅವರಿಗೆ 97ವರ್ಷ ವಯಸ್ಸಾಗಿತ್ತು. ಬಾಲಿವುಡ್ನ ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA)ದ ಅನಿಲ್ ಗಾಯಕ್ವಾಡ್ ಈ ಬಗ್ಗೆ ದೃಢಪಡಿಸಿದ್ದಾರೆ. ಇಂದು ಮುಂಜಾನೆ 7ಗಂಟೆ ಹೊತ್ತಿಗೆ ಚಂದ್ರಶೇಖರ್ ಮೃತಪಟ್ಟಿದ್ದು, ಇಂದೇ ಅಂತ್ಯಕ್ರಿಯೆ ನಡೆಯುವುದು ಎಂದು ತಿಳಿಸಿದ್ದಾರೆ.
ಚಂದ್ರಶೇಖರ್ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ವಯೋಸಹಜವಾದ ಕೆಲವು ತೊಂದರೆಗಳು ಇದ್ದವು. ರಾತ್ರಿ ಮಲಗಿದ್ದವರು ಬೆಳಗ್ಗೆ ಅನ್ನುವಷ್ಟರಲ್ಲಿ ಇಲ್ಲ. ಕಳೆದ ಗುರುವಾರ ಒಂದು ದಿನದ ಮಟ್ಟಿಗೆ ಚೆಕಪ್ಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಮನೆಗೆ ಕರೆದುಕೊಂಡು ಬಂದಿದ್ದೆವು. ಕಳೆದ ರಾತ್ರಿಯೂ ಆರೋಗ್ಯವಾಗಿಯೇ ಇದ್ದರು. ಬೆಳಗ್ಗೆ ಅನ್ನುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇಂದು ಸಂಜೆ 4ಗಂಟೆಗೆ ವೈಲ್ ಪಾರ್ಲೆಯ ಪವನ್ ಹಂಸ್ನಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದು ಅವರ ಪುತ್ರ ಅಶೋಕ್ ತಿಳಿಸಿದ್ದಾರೆ.
ಚಂದ್ರಶೇಖರ್ ಸುಮಾರು 250 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಸಿನಿಮಾ ಸುರಂಗ್ 1953ರಲ್ಲಿ ಬಿಡುಗಡೆಯಾಗಿದೆ. ಗೇಟ್ವೇ ಆಫ್ ಇಂಡಿಯಾ, ಫ್ಯಾಶನ್, ಬರ್ಸತ್ ಕಿ ರಾತ್ ಮತ್ತಿತರ ಪ್ರಮುಖ ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. 1964ರಲ್ಲಿ ಚಾ ಚಾ ಚಾ ಎಂಬ ಮ್ಯೂಸಿಕಲ್ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಖ್ಯಾತ ನಟಿ, ನೃತ್ಯಗಾರ್ತಿ ಹೆಲೆನ್ ಮುಖ್ಯಭೂಮಿಕೆಯಲ್ಲಿ ಇದ್ದರು. ಇನ್ನು 1985ರಿಂದ 1996ರವರೆಗೆ ಸಿನಿ ಮತ್ತು ಕಲಾವಿದರ ಸಂಘದ (CINTAA) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಖ್ಯಾತ ಕಿರುತೆರೆ ಕಲಾವಿದ ಶಕ್ತಿ ಅರೋರಾ ಚಂದ್ರಶೇಖರ್ ಅವರ ಮೊಮ್ಮಗನೇ ಆಗಿದ್ದಾರೆ.
ಇದನ್ನೂ ಓದಿ: Tunga Dam: ತುಂಗಾ ಡ್ಯಾಂ ಭರ್ತಿ; ಮಲೆನಾಡಿನ ಸೌಂದರ್ಯದ ಹೆಚ್ಚಳಕ್ಕೆ ಸಾಕ್ಷಿ ಆಯ್ತು ಮುಂಗಾರು ಮಳೆ