‘ಸಿನಿಮಾ ಮಾಡುವವರಲ್ಲಿ ಎರಡು ತರಹದ ಜನ ಇರುತ್ತಾರೆ. ಒಂದು, ಹಣ ಮಾಡುವವರು. ಇನ್ನೊಂದು, ಅವಕಾಶವಾದಿಗಳು’ ಎಂದು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಹೇಳಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸ್ತ್ರೀವಾದಿಗಳು (Feminist) ಎಂದು ಹೇಳಿಕೊಂಡು ಸಿನಿಮಾ ಮಾಡುವ ನಿರ್ದೇಶಕರು ಮತ್ತು ನಿರ್ಮಾಪಕರ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಅವರು ತಿಳಿಸಿದ್ದಾರೆ. ಈ ರೀತಿಯ ಬಹುತೇಕ ಫಿಲ್ಮ್ ಮೇಕರ್ಗಳು ಫ್ರಾಡ್ಗಳಾಗಿರುತ್ತಾರೆ ಎಂದು ಅನುರಾಗ್ ಕಶ್ಯಪ್ ಹೇಳಿರುವುದು ಚರ್ಚೆ ಹುಟ್ಟುಹಾಕಿದೆ.
ಸಂವಾದ ಕಾರ್ಯಕ್ರಮದಲ್ಲಿ ಅನುರಾಗ್ ಕಶ್ಯಪ್ ಅವರು ಈ ರೀತಿ ಮಾತನಾಡಿದ್ದಾರೆ. ‘ಸ್ತ್ರೀವಾದಿ, ಸಮಾಜವಾದಿ, ಕ್ರಾಂತಿಕಾರಿಗಳು ಎನ್ನುವ ಫಿಲ್ಮ್ ಮೇಕರ್ಗಳ ಬಗ್ಗೆ ಪ್ರಾಮಾಣಿಕವಾಗಿ ಹೇಳುತ್ತೇನೆ. ಇಂಥವರಲ್ಲಿ ಶೇಕಡ 90ರಷ್ಟು ಮಂದಿ ವಂಚಕರು. ಅಂಥವರೆಲ್ಲ ತೋರಿಕೆ ಮಾಡುತ್ತಾರೆ. ಸ್ವತಂತ್ರವಾಗಿ ಸಿನಿಮಾ ಮಾಡುವ ಎಲ್ಲರನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ ಬಳಿಕ ನನಗೆ ಅನಿಸಿದ್ದು ಏನೆಂದರೆ ಅವರು ತುಂಬ ಕಳಪೆ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬುದ್ಧಿಜೀವಿಗಳು ಮತ್ತು ಮೂರ್ಖರ ನಡುವೆ ಏನು ವ್ಯತ್ಯಾಸ ಇದೆ? ಮೂರ್ಖರು ಒಗ್ಗಟ್ಟಾಗಿದ್ದಾರೆ. ಬುದ್ಧಿಜೀವಿಗಳು ಪರಸ್ಪರ ಕಾಲು ಎಳೆದುಕೊಂಡಿದ್ದಾರೆ’ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಇದನ್ನೂ ಓದಿ: ಹೆಡ್ಲೈನ್ ಓದಿ ಯಾಮಾರಿದ ವಿವೇಕ್ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇ ಬೇರೆ
ಅನುರಾಗ್ ಕಶ್ಯಪ್ ಅವರು ಆಗಾಗ ಹೊಸ ಸಿನಿಮಾಗಳ ವಿಮರ್ಶೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ‘ಲಾಪತಾ ಲೇಡೀಸ್’ ಸಿನಿಮಾ ವೀಕ್ಷಿಸಿದ್ದಾರೆ. ಅದರ ಬಗ್ಗೆ ತಮ್ಮ ವಿಮರ್ಶೆ ತಿಳಿಸಿದ್ದಾರೆ. ಈ ಸಿನಿಮಾ ಅವರಿಗೆ ತುಂಬ ಇಷ್ಟ ಆಗಿದೆ. ಮಹಿಳಾ ಪ್ರಧಾನ ಕಥಾಹಂದರ ಇರುವ ಈ ಚಿತ್ರಕ್ಕೆ ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಮಾರ್ಚ್ 1ರಂದು ಬಿಡುಗಡೆ ಆಗಿರುವ ಈ ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿದೆ.
‘ಎಂತಹ ಒಂದು ಸುಂದರವಾದ, ತಮಾಷೆಯಾದ, ಪ್ರಾಮಾಣಿಕವಾದ ಸಿನಿಮಾವನ್ನು ಕಿರಣ್ ರಾವ್ ಮಾಡಿದ್ದಾರೆ. ಹಲವು ವಿಚಾರಗಳನ್ನು ಅವರು ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಇದೊಂದು ಭಾವನಾತ್ಮಕವಾದ ಸಿನಿಮಾ. ಅದ್ಭುತವಾದ ಪ್ರೇಮಕಥೆ ಇದೆ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಸತ್ಯಗಳನ್ನು ಮುಖಕ್ಕೆ ಹೊಡೆದಂತೆ, ಹಾಸ್ಯದ ಧಾಟಿಯಲ್ಲಿ ಹೇಳಲಾಗಿದೆ. ಈ ಸಿನಿಮಾ ನೋಡಿ ನಾನು ಚಿಕ್ಕ ಮಗುವಿನ ರೀತಿ ಕಣ್ಣೀರು ಹಾಕಿದೆ. ಈ ಅವಿಸ್ಮರಣೀಯ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ಅನುರಾಗ್ ಕಶ್ಯಪ್ ಅವರು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.